ಕಾಪು : ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತಗೊಂಡು ಓರ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮೂಳೂರು ಬಳಿ ನಡೆದಿದೆ. ಖ್ಯಾತ ಡಿಜೆ ಮರ್ವಿನ್ ಮೃತಪಟ್ಟವರು, ಪ್ರಜ್ವಲ್, ಪ್ರಸಾದ್ ಗಂಭೀರವಾಗಿ ಗಾಯಗೊಂಡವರು.

ಇಂದು ಮುಂಜಾನೆ ಕಾಪು ಮೂಳೂರು ಬಳಿ ಬರುವಾಗ ನಾಯಿಯೊಂದು ಕಾರಿಗೆ ಅಡ್ಡ ಬಂದಿತ್ತು. ನಾಯಿಯನ್ನು ಉಳಿಸುವ ಯತ್ನದಲ್ಲಿ ಕಾರು ಪಲ್ಟಿಯಾಗಿ ಅಪಘಾತಗೊಂಡಿದೆ. ಅಪಘಾತದಲ್ಲಿ ಡಿಜೆ ಮರ್ವಿನ್ ಮೃತಪಟ್ಟಿದ್ದು, ಪ್ರಜ್ವಲ್, ಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಗಳನ್ನು ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಚ್ಚಿಲ ಆ್ಯಂಬುಲೆನ್ಸ್ ಜಲಾಲುದ್ದೀನ್, ಹಮೀದ್, ಕೆ ಎಂ ಸಿರಾಜ್ ಮತ್ತು ಅನ್ವರ್ ಕೋಟೇಶ್ವರ ಅವರು ತಕ್ಷಣ ನೆರವಿಗೆ ಬಂದಿದ್ದಾರೆ.

ಉಡುಪಿ, ಮಂಗಳೂರಿನಲ್ಲಿಖ್ಯಾತರಾಗಿರುವ ಡಿ ಜೆ ಮರ್ವಿನ್ ಮೆಂಡೋನ್ಸಾ ಹಲವಾರು ಕೊಂಕಣಿ ಮ್ಯೂಸಿಕ್ ವಿಡಿಯೋಗಳನ್ನು ಕೂಡಾ ನಿರ್ದೇಶನ ಮಾಡಿದ್ದರು. ನಿನ್ನೆಯಷ್ಟೇ ಹೊಸ ಕೊಂಕಣಿ ಮ್ಯೂಸಿಕ್ ವಿಡಿಯೋ ಬಿಡುಗಡೆ ಆಗಿತ್ತು.