ಉಡುಪಿ: ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿರುವ ಡಾ. ಶಿವರಾಮ ಕಾರಂತರ ಪ್ರವಾಸ ಕಥನಗಳು ವಿಶಿಷ್ಟ ಅಭಿವ್ಯಕ್ತಿಯಾಗಿವೆ. ಅವರ ಪ್ರವಾಸ ಕಥನಗಳು ನಾಡಿನ ವಾಸ್ತವ ಅನುಭವಗಳನ್ನು ಓದುಗರು ಕಣ್ಣಾರೆ ಕಂಡಂತೆ ಅನುಭವಿಸುವ ರೀತಿಯಲ್ಲಿ ಚಿತ್ರಿಸುತ್ತವೆ. ಅಲ್ಲದೆ, ಓದುಗರ ಸಾಂಸ್ಕೃತಿಕ ಹಾಗೂ ಕಲಾತ್ಮಕ ಜ್ಞಾನವನ್ನು ವೃದ್ಧಿಸುತ್ತವೆ ಎಂದು ಪತ್ರಕರ್ತ, ಉಪನ್ಯಾಸಕ ಡಾ. ಗಣೇಶ್ ಪ್ರಸಾದ್ ನಾಯಕ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಅರಿವಿನ ಬೆಳಕು’ ಉಪನ್ಯಾಸ ಮಾಲಿಕೆ–18 ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತರ ಪ್ರವಾಸ ಕಥನಗಳ ಸ್ವಾರಸ್ಯಗಳು ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ ಭಟ್, ಕಾರಂತರ ಕೃತಿಗಳು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಮಾತನಾಡಿ, ಕಾರಂತರ ಕೃತಿಗಳು ಯುವಜನರಲ್ಲಿ ಬಹುಶಿಸ್ತೀಯ ಅಧ್ಯಯನದ ಆಸಕ್ತಿ ಬೆಳೆಸಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರಜ್ಞಾ ಮಾಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ದೇವರಾಜ್ ಪುತ್ರನ್ ಕಾರ್ಯಕ್ರಮ ನಿರೂಪಿಸಿ, ಗಣೇಶ್ ವಂದಿಸಿದರು.



