ಉಡುಪಿ: ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಧರ್ಮ ಸಂಸ್ಥಾಪನೆಗಾಗಿ ಶ್ರೀಕೃಷ್ಣನು ಪಾಂಚಜನ್ಯ ಶಂಖನಾದ ಮೊಳಗಿಸಿದಂತೆ, ಇಂದಿನ ಯುದ್ಧ ಭೀತಿ, ಅಶಾಂತಿ ಮತ್ತು ದುಷ್ಟಚಟುವಟಿಕೆಗಳಿಂದ ಕಲುಷಿತವಾಗಿರುವ ವಿಶ್ವಕ್ಕೆ ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಿಂದ ಮತ್ತೊಮ್ಮೆ ಶಾಂತಿಯ ಶಂಖನಾದ ಮೊಳಗಬೇಕಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. ಅವರು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಆಯೋಜಿಸಲಾದ ‘ವಿಶ್ವ ಶಾಂತಿ ಸಮ್ಮೇಳನ–2025’ ಅನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಸಜ್ಜನರು ಯಾವುದೇ ಪಂಗಡದವರಾಗಿದ್ದರೂ ರಕ್ಷಿಸಲ್ಪಡಬೇಕು ಹಾಗೂ ದುಷ್ಟರು ಯಾವುದೇ ಪಂಗಡದಲ್ಲಿದ್ದರೂ ಶಿಕ್ಷೆ ಆಗಲೇಬೇಕು ಎಂಬುದೇ ಧರ್ಮದ ಸಾರ ಎಂದು ಹೇಳಿದರು

ಅಮೆರಿಕದ ವಿಶ್ವ ಶಾಂತಿಗಾಗಿ ಧರ್ಮ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವಿಲಿಯಂ ಎಫ್. ವೆಂಡ್ಲಿ ಮಾತನಾಡಿ, ಸುತ್ತಮುತ್ತಲಿನ ಎಲ್ಲರನ್ನೂ ಗೌರವಿಸುವುದೇ ವಿಶ್ವ ಶಾಂತಿಯ ಮೂಲಮಂತ್ರ. ಶಸ್ತ್ರಗಳಿಂದ ಶಾಂತಿ ಸಾಧ್ಯವಿಲ್ಲ. ಮಾನವೀಯತೆ, ಯುಕ್ತಿ ಮತ್ತು ಪರಸ್ಪರ ಗೌರವ ಭಾವನೆಯಿಂದ ಮಾತ್ರ ಶಾಂತಿ ಸಾಧ್ಯ. ಭಾರತವು ಶಾಂತಿಪ್ರಿಯ ದೇಶ ಎಂಬುದನ್ನು ವಿಶ್ವವೇ ಒಪ್ಪಿಕೊಂಡಿದೆ ಎಂದು ಹೇಳಿದರು.ಆಂಧ್ರಪ್ರದೇಶದ ರಾಜ್ಯಪಾಲ ಸೈಯದ್ ಅಬ್ದುಲ್ ನಜೀರ್ ಮಾತನಾಡಿ, ಉಡುಪಿಯು ಕೇವಲ ನಗರವಲ್ಲ, ಅದು 800 ವರ್ಷಗಳ ಜೀವಂತ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಶ್ರೀಕೃಷ್ಣ ಆರಾಧನೆ ಮತ್ತು ಗೀತಾ ಸಂದೇಶದ ಮೂಲಕ ಇಲ್ಲಿನ ಅಷ್ಟಮಠಗಳು ಶಾಂತಿ ಮತ್ತು ಸೌಹಾರ್ದತೆಯನ್ನು ಪೋಷಿಸುತ್ತಿವೆ. ಗೀತೆಯ ಅನುಸರಣೆ ಜೀವನದಲ್ಲಿ ಅಳವಡಿಸಿಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಗುಣೇಂದ್ರ ತೀರ್ಥ ಶ್ರೀಪಾದರ ಸರ್ವಮೂಲ ಭಾವ ಪರಿಚಯ, ಡಾ. ಚೂಡಾಮಣಿ ನಂದಗೋಪಾಲ್ ಹಾಗೂ ಡಾ. ಅರುಣಾ ಕೆ.ಆರ್. ರಚಿಸಿದ ಉಡುಪಿ ಶ್ರೀಕೃಷ್ಣ ಮಠ – ದೇವಾಲಯದ ಸಂಸ್ಕೃತಿ ಸಿರಿ (ಕನ್ನಡ–ಇಂಗ್ಲಿಷ್), ಹಾಗೂ ಗೀತಾಮೃತ ಸಾರ (ಚತುರ್ಥ ಮುದ್ರಣ) ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಸುರೇಶ್ ಪುತ್ತಿಗೆ (ಯುಎಸ್ಎ), ಕವಿತಾ ಪಾಲಿಮಾರ್, ದಿವ್ಯಶ್ರೀ ಮಂಜುನಾಥ್ (ಯುಎಸ್ಎ), ಡಾ. ಬಿ. ನರಸಿಂಹಮೂರ್ತಿ, ಗೋಮತಿನಾಥನ್, ಕೇಶವ್ ರಾಜ್ ಉಪಸ್ಥಿತರಿದ್ದರು. ಪ್ರೊ. ಸುಧೀರ್ ರಾಜ್ ಕೆ. ವಂದಿಸಿದರು. ರೋಹಿತ್ ಚಕ್ರತಿರ್ಥ ಕಾರ್ಯಕ್ರಮ ನಿರೂಪಿಸಿದರು.



