ಉಡುಪಿ: ಬೆಂಗಳೂರು ರಾಜ್ಯ ಸಮಿತಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) – ಭೀಮ ಘರ್ಜನೆ ಇವರಿಂದ 77ನೇ ಸಂವಿಧಾನ ಅರ್ಪಣ ದಿನವನ್ನು ಉಡುಪಿ ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ಆಚರಿಸಲಾಯಿತು.

ಈ ಸಂದರ್ಭ ಉಡುಪಿಯ ತಾಲೂಕು ಪಂಚಾಯತ್ ಕಚೇರಿಯಿಂದ ಗೌತಮ್ ತಲ್ಲೂರು ಹಾಗೂ ಗಗನ್ ತಲ್ಲೂರು ನೇತೃತ್ವದಲ್ಲಿ ನೀಲಿ ಭೀಮ ಸೈನ್ಯದ ಪಥಸಂಚಲನ ನಡೆಸಲಾಗಿದ್ದು, ಡಾ. ಉದಯ್ ಕುಮಾರ್ ತಲ್ಲೂರು ಅವರು ಚಾಲನೆ ನೀಡಿದರು. ಪಥಸಂಚಲನವು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಕಾರ್ಯಕ್ರಮವನ್ನು ವಕೀಲ ರವಿಕಿರಣ್ ಮುರುಡೇಶ್ವರ ಕುಂದಾಪುರ ಅವರು ಉದ್ಘಾಟಿಸಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಹಾಗೂ ಸಂವಿಧಾನಿಕ ಕೊಡುಗೆಗಳನ್ನು ವಿವರಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿ ರಾಮ್ ಶಂಕರ್ ಅವರು ಭೀಮ ರತ್ನ ರಾಜ್ಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರದಾನಿಸಿ, ಅಂಬೇಡ್ಕರ್ ಅವರ ಬರಹಗಳು ತಮ್ಮ ಬದುಕಿನ ಮೇಲೆ ಬೀರಿದ ಪ್ರಭಾವವನ್ನು ಹಂಚಿಕೊಂಡರು. ಅಂಬೇಡ್ಕರ್ ಕುರಿತು ಭಾಷಣ ಮಾಡಿದ ಅಂಗನವಾಡಿ ಪುಟಾಣಿಗಳಾದ ಶರೀಕ್ಷ ಮತ್ತು ಅನೀಶ್ ಕುಮಾರ್ ಅವರಿಗೆ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ವಹಿಸಿಕೊಂಡು, ಸಂವಿಧಾನ ಮೌಲ್ಯಗಳಿಗಾಗಿ ನಿರಂತರ ಹೋರಾಟ ಅಗತ್ಯವೆಂದು ಹೇಳಿದರು.

ಚಂದ್ರ ಅಲ್ತಾರು ಸ್ವಾಗತಿಸಿ, ಸಿದ್ದು ಮೇಲಿನ ಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಮಲತಾ ಬಜಗೋಳಿ ನಿರೂಪಿಸಿ ವಂದಿಸಿದರು.



