ಉಡುಪಿ: ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ಶ್ರೀ ರಘುನಾಯಕ ಜಪ ಕೇಂದ್ರಕ್ಕೆ ಶ್ರೀರಾಮ ದಿಗ್ವಿಜಯ ರಥ ಅದ್ದೂರಿಯಾಗಿ ಪುರಪ್ರವೇಶ ಮಾಡಿತು.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದರ ಮಠ ಪರಂಪರೆಯ 550ನೇ ವರ್ಷದ ಆಚರಣೆ ಪ್ರಯುಕ್ತ, ಬದರಿ ಕ್ಷೇತ್ರದಿಂದ ಪ್ರಾರಂಭಗೊಂಡ ಈ ದಿಗ್ವಿಜಯ ರಥವು ವಾರಾಣಸಿ, ಅಯೋಧ್ಯೆ ಸೇರಿದಂತೆ ಅನೇಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಉಡುಪಿಗೆ ಆಗಮಿಸಿತು.

ಹಳೆಯ ಡಯಾನ ವೃತ್ತದ ಬಳಿಯಲ್ಲಿ ರಥಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮಂಗಳವಾದ್ಯ, ಚಂಡೆವಾದನ, ಭಜನೆ ಹಾಗೂ ಶ್ರೀ ರಾಮನಾಮ ಸ್ಮರಣೆ ಗಾನಗಳ ನಡುವೆ ಭಕ್ತರು ರಥವನ್ನು ದೇವಾಲಯ ಪ್ರವೇಶಕ್ಕೆ ಕರೆತಂದರು. ಶ್ರೀ ದೇವರ ಸನ್ನಿಧಿಯಲ್ಲಿ ಸಮೂಹ ಪ್ರಾರ್ಥನೆ ಹಾಗೂ ಧಾರ್ಮಿಕ ಪೂಜೆಗಳನ್ನು ವಿನಾಯಕ ಭಟ್, ದಯಾಘನ್ ಭಟ್, ದೀಪಕ್ ಭಟ್ ಹಾಗೂ ಮಠದ ಅರ್ಚಕವೃಂದದವರು ನೆರವೇರಿಸಿದರು.

ದೇವರಿಗೆ ವಿಶೇಷ ಅಲಂಕಾರ, ಶ್ರೀರಾಮ ನಾಮ ಜಪ ಪಠಣ, ಭಜನಾ ಸೇವೆ, ದೀಪಾಲಂಕಾರ ಸೇವೆ, ಪ್ರಸನ್ನ ಪೂಜೆ, ಮಹಾಪೂಜೆ ವಿಧಿವಿಧಾನಗಳೊಂದಿಗೆ ಭಕ್ತಿಪೂರ್ಣ ವಾತಾವರಣ ನಿರ್ಮಾಣಗೊಂಡಿತು. ಪೂಜೆ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಸಮಾರಾಧನೆ ನೆರವೇರಿತು.

ಕಾರ್ಯಕ್ರಮದ ಯಶಸ್ವಿ ನಡೆಯುವಲ್ಲಿ ರಾಮನಾಮ ಜಪ ಅಭಿಯಾನ ಸಮಿತಿಯ ದೀಪಕ್ ಶಾನ್ ಭಾಗ್, ಶಂಕರ ಶೆಣೈ, ಸಂದೀಪ್ ನಾಯಕ್, ಜಗದೀಶ್ ಪೈ, ಭಾಸ್ಕರ್ ಶೆಣೈ, ಮಟ್ಟಾರ್ ಸತೀಶ್ ಕಿಣಿ, ರಾಜೇಶ್ ಪೈ, ವಸಂತ್ ಕಿಣಿ, ಪ್ರಕಾಶ್ ಶೆಣೈ ಹಾಗು ದೇವಸ್ಥಾನದ ಆಡಳಿತ ಮಂಡಳಿ, ಜಿ.ಎಸ್.ಬಿ ಮಹಿಳಾ ಮಂಡಳಿ ಹಾಗೂ ಜಿ.ಎಸ್.ಬಿ ಯುವಕ ಮಂಡಳಿಯ ಸದಸ್ಯರು ಸಹಕರಿಸಿದರು.



