ಬೆಂಗಳೂರು: ಸುವರ್ಣ ಸೌಧದ ನಡೆದ ಅಧಿವೇಶನದಲ್ಲಿ ಉಡುಪಿ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಅವರ ರಾಜಕೀಯ ಅಸಮರ್ಥತೆ, ಅನುಭವದ ಕೊರತೆ ಮತ್ತು ಮಾತಿನ ಅಸಂಯಮ ಎದ್ದು ಕಾಣುತ್ತಿದೆ. ಪ್ರಶ್ನೋತ್ತರ ವೇಳೆಯಲ್ಲಿಯೇ ಸ್ಪೀಕರ್ ಯು.ಟಿ. ಖಾದರ್ ಅವರು ನೀಡಿದ ಕಟುವಾದ ತಾಕೀತು, ಯಾರಾದರೂ ಚುನಾಯಿತ ಪ್ರತಿನಿಧಿಗೆ ದೊರಕಬಹುದಾದ ಸಾರ್ವಜನಿಕ ಅವಮಾನಗಳಲ್ಲಿ ಅತ್ಯಂತ ಗಂಭೀರ ಉದಾಹರಣೆಯೊಂದು. ಉಡುಪಿ ಶಾಸಕರಿಗೆ ಸಭಾ ನಡಾವಳಿಯ ಕುರಿತು ಮಾಹಿತಿ ಇಲ್ಲವೇ ಎಂದು ಸ್ಪೀಕರ್ ಯು.ಟಿ. ಖಾದರ್ ಸ್ವತಃ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ಹೇಳಿದ್ದಾರೆ.

ಟಿವಿಯಲ್ಲಿ ಕಾಣಿಸಿಕೊಳ್ಳಲು ಮಾತನಾಡಬೇಡಿ, ನಿಮ್ಮ ಪ್ರಶ್ನೆ ನೇರವಾಗಿ ಕೇಳಿ, ಪೀಠಿಕೆ ಬೇಡ, ಹರಿ ಕಥೆ ಬೇಡ, ಇಂತಹ ಮಾತುಗಳು ಮಾತನಾಡಲು ಸ್ಪೀಕರ್ ಒತ್ತಾಯಿಸಿರುವುದು, ಜನರ ಕಳಕಳಿಯನ್ನು ಪ್ರತಿನಿಧಿಸಬೇಕಾದ ಶಾಸಕರೊಬ್ಬರು ಮೂಲಭೂತ ಸಂಸತ್ತಿನ ನಿಯಮಗಳನ್ನೂ ಅರಿತಿಲ್ಲ ಎಂಬುದನ್ನು ಪ್ರದರ್ಶಿಸುತ್ತದೆ. ಉಡುಪಿ ಕ್ಷೇತ್ರಕ್ಕೆ ಇದು ಅಪಮಾನ, ಉಡುಪಿಯ ಜನರು ಸಮಸ್ಯೆಗಳನ್ನು ಮಂಡಿಸಲಿ ಎಂದು ಆಯ್ಕೆ ಮಾಡಿದ ಶಾಸಕ, ಪ್ರಶ್ನೆಯನ್ನು ನೇರವಾಗಿ ಕೇಳಲಾಗದ ಸ್ಥಿತಿ, ನಿಯಮೋಪನಿಯಮಗಳನ್ನು ಪಾಲಿಸದ ಅಜಾಗರೂಕತ್ವ, ವಿಷಯಕ್ಕಿಂತ ರಾಜಕೀಯ ಪ್ರದರ್ಶನಕ್ಕೆ ಆದ್ಯತೆ ನೀಡುವ ಧೋರಣೆ, ಇವೆಲ್ಲವನ್ನೂ ಕಂಡು ಸ್ಪೀಕರ್ ತಡೆಹಿಡಿಯುವ ಸ್ಥಿತಿ ಬಂದಿದೆ. ಸದನದಲ್ಲಿ ನಿಂತು ಮಾತನಾಡುವ ಸಾಮರ್ಥ್ಯವಿಲ್ಲದವರು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಯಾವ ಮಟ್ಟದ ಹೋರಾಟ ಮಾಡಬಲ್ಲರು? ಯಶ್ ಪಾಲ್ ಸುವರ್ಣ ಅವರ ವರ್ತನೆಗಳು ಒಂದೇ ಸಂದೇಶ ನೀಡುತ್ತಿವೆ ಸದನದಲ್ಲಿ ಗಂಭೀರ ವಿಷಯಗಳನ್ನು ಮಂಡಿಸಲು ಬಂದವರಿಗಿಂತ, ಕ್ಯಾಮೆರಾ ಎದುರುದೋರಿಸಲು ಹೆಚ್ಚು ಆಸಕ್ತಿ ಇರುವ ರಾಜಕಾರಣಿ. ಸ್ಪೀಕರ್ ನೀಡಿದ ಎಚ್ಚರಿಕೆ,
ಅದು ಒಂದು ರಾಜಕೀಯ ಶಿಸ್ತುಬೋಧನ, ಒಂದು ಅರ್ಹತಾ ಪ್ರಶ್ನೆ ಮತ್ತು ಒಂದಿಷ್ಟು ತೀವ್ರವಾದ ಸಾರ್ವಜನಿಕ ತಿದ್ದುಪಡಿ ಕೂಡ ಹೌದು ಎಂದಿದ್ದಾರೆ.



ಉಡುಪಿ ಕ್ಷೇತ್ರಕ್ಕೆ ನಿಜವಾದ ಪ್ರತಿನಿಧಿತ್ವ ಬೇಕು, ಮೈಕ್ ಹಿಡಿದು ಹರಿ ಕಥೆ ಹೇಳುವವರಲ್ಲ. ಜನರ ನಿಜವಾದ ಪ್ರಶ್ನೆಗಳನ್ನು ಕೇಳಬೇಕಾದ ವೇದಿಕೆಯಲ್ಲಿ, ಪೀಠಿಕೆಗಳನ್ನೆಳೆದು ಸಮಯ ವ್ಯರ್ಥ ಮಾಡುವ ಧೋರಣೆ, ಸ್ಪೀಕರ್ಗಳನ್ನು ಕೆಣಕುವ ಮಟ್ಟದ ಅಸಂಸ್ಕೃತ ಮಾತಿನ ಆರಂಭ, ಇವೆಲ್ಲವು ಒಟ್ಟಾಗಿ ಶಾಸಕರ ಕಾರ್ಯಕ್ಷಮತೆ ಕುರಿತ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ. ಇಂದು ನಡೆದ ಘಟನೆ ಗಂಭೀರವಾದದ್ದು, ಯಾಕೆಂದರೆ ಇದು ಒಬ್ಬ ಶಾಸಕರ ವೈಯಕ್ತಿಕ ವೈಫಲ್ಯವಲ್ಲ ಇದು ಉಡುಪಿ ಜನರ ಧ್ವನಿಯನ್ನೇ ನಿಗ್ರಹಿಸಿದಂತದ್ದು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



