ಉಡುಪಿ : ರಾಷ್ಟ್ರೀಯ ಹೆದ್ದಾರಿ 169ಎಯ ಕರಾವಳಿ ಜಂಕ್ಷನ್‌ನಿಂದ ಕಲ್ಮಾಡಿ ಸೇತುವೆವರೆಗೆ ಇಕ್ಕೆಲಗಳಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಭೂಮಾಲಿಕರಿಗೆ ಪರಿಹಾರ ಪಾವತಿ ವಿಳಂಬವಾಗಿರುವುದು, ಭಾಗಶಃ ಸ್ವಾಧೀನಗೊಂಡ ಭೂಮಿಗಳಿಗೆ ಪೋಡಿ ರಚನೆಯಲ್ಲಾದ ತಡದಿಂದ ಹಣ ಪಾವತಿಯಲ್ಲಿ ಉಂಟಾದ ಸಮಸ್ಯೆ, ವಿದ್ಯುತ್ ಕಂಬಗಳ ಸ್ಥಳಾಂತರದ ತೊಂದರೆಯಿಂದ ಮರಗಳ ತೆರವು ಕಾರ್ಯಕ್ಕೆ ಆಗಿರುವ ಅಡಚಣೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪರಿಶೀಲನೆ ನಡೆಸಲಾಯಿತು.

ಭೂಮಾಲಿಕರ ಖಾತಾ ಸಮಸ್ಯೆ, ವ್ಯಾಜ್ಯ ಅಥವಾ ತಕರಾರುಗಳಿದ್ದಲ್ಲಿ ಪರಿಹಾರದ ಹಣವನ್ನು ಅವರ ಹೆಸರಿನಲ್ಲಿ ಠೇವಣಿ ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸ್ಥಳೀಯರು ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಹಲವು ದಿನಗಳಿಂದ ಕಾಯುತ್ತಿದ್ದೇವೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ, ಶಾಲಾ ಮಕ್ಕಳ ಪರೀಕ್ಷಾ ಅವಧಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಗಿತಗೊಳಿಸಿ ಕಂಬಗಳ ತೆರವಿಗೆ ಅವಕಾಶ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸುಮಾರು 2 ಕಿ.ಮೀ ರಸ್ತೆ ಭಾಗದಲ್ಲಿ ಸಂಚರಿಸಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ವೇಳೆ ಸಮರ್ಪಕ ದಾಖಲೆ ಸಲ್ಲಿಸಿದ ಭೂಮಾಲಿಕರಿಗೆ ಒಂದು ವಾರದೊಳಗೆ ಪರಿಹಾರ ಹಣ ಪಾವತಿಸಲು ಹಾಗೂ 3ಡಿ ಪ್ರಕ್ರಿಯೆ ಅಪೂರ್ಣವಾಗಿರುವವರಿಗೆ 15 ದಿನಗಳೊಳಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು. ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಮಳೆಗಾಲಕ್ಕೂ ಮುನ್ನ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಲೋಕೇಶ್, ಶಶಿಧರ್ ನವೀನ್, ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕೇಯ, ಮಾಜಿ ನಗರಸಭಾ ಸದಸ್ಯ ಸುಂದರ ಕಲ್ಮಾಡಿ, ಮಲ್ಪೆ ಠಾಣಾಧಿಕಾರಿ ಈರಣ್ಣ ಶಿರಗುಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



