ಉಡುಪಿ : ಬೀಡಿ ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಬಗೆಹರಿಸಲು ಆಗ್ರಹಿಸಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಗಳ ಜಂಟಿ ಕ್ರೀಯಾ ಸಮಿತಿ ನೇತೃತ್ವದಲ್ಲಿ ಅಕ್ಟೋಬರ್ 7ರಿಂದ 17ರವರೆಗೆ ಹತ್ತು ದಿನಗಳ ಹಕ್ಕೊತ್ತಾಯ ಚಳುವಳಿ ಪ್ರಾರಂಭವಾಗಿದೆ. ಇದರ ಅಂಗವಾಗಿ ಕಾರ್ಕಳದ ಭಾರತ್ ಬೀಡಿ ಕಂಪನಿ ಮುಂದೆ ಇಂದು ಭಾರೀ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಯಿತು.

ಕಾರ್ಮಿಕರು 2018ರಿಂದ 2024ರವರೆಗೆ ಬಾಕಿ ಉಳಿದಿರುವ ಕನಿಷ್ಠ ಕೂಲಿ ಹೆಚ್ಚಳ (₹40) ಹಾಗೂ ತುಟ್ಟಿಭತ್ಯೆ ಹಣ ತಕ್ಷಣ ಪಾವತಿಸಲು ಆಗ್ರಹಿಸಿದರು. ಪ್ರತಿಭಟನಾಕಾರರು “ಬಾಕಿ ವೇತನ ಮತ್ತು ತುಟ್ಟಿಭತ್ಯೆ ನೀಡದಿದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು. ಕರ್ನಾಟಕ ರಾಜ್ಯ ಬೀಡಿ ಫೆಡರೇಶನ್ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಬೀಡಿ ಕಾರ್ಮಿಕರ ಸಾವಿರಾರು ಕೋಟಿ ಹಣ ಕಂಪನಿಯವರು ಬಾಕಿ ಇಟ್ಟುಕೊಂಡಿದ್ದಾರೆ. ಕಾನೂನಿನ ಪ್ರಕಾರ ನೀಡಬೇಕಾದ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಅವರು ಆರೋಪಿಸಿ, ಬೀಡಿ ಕಾರ್ಮಿಕರ ಬೆವರಿನ ಹಣದಿಂದ ಕಂಪನಿ ಮಾಲೀಕರು ಬೇರೆ ಉದ್ಯಮ ಆರಂಭಿಸಿದ್ದಾರೆ. ಇತ್ತೀಚಿಗೆ ‘ಭಾರತ್ ಬೀಡಿ’ ಸಂಸ್ಥೆಯವರು 30ನೇ ಕಂಪನಿ ಹೆಸರಿನಲ್ಲಿ ಟೀ ಪುಡಿ ಉದ್ಯಮ ಆರಂಭಿಸಿರುವುದು ನೈತಿಕವಾಗಿ ತಪ್ಪಾಗಿದೆ ಎಂದು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ವಹಾಬಲ ವಡೆಯರ ಹೋಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಮುಖಂಡರಾದ ಬಲ್ಕೀಸ್, ನಳಿನಿ ಎಸ್., ಮೋಹನ್, ನಾಗೇಶ್, ಹಾಗೂ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಕೋಶಾಧಿಕಾರಿ ಸುಮತಿ ಎಸ್., ಮುಖಂಡರಾದ ವಿಲಾಸಿನಿ, ಶಕುಂತಲಾ, ಜಯಂತಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕವಿರಾಜ್ ರಸ್. ಕಾಂಚನ್ ಸ್ವಾಗತಿಸಿ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.
