ಉಡುಪಿ : ಅನಗತ್ಯವಾಗಿ ನೂರಾರು ಕಡತಗಳನ್ನು ವಿಲೇವಾರಿ ಮಾಡದೇ ಬಾಕಿ ಉಳಿಸಿಕೊಂಡಿರುವ ಕುರಿತು ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ (ಯುಡಿಎ) ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಸಂಜೆ ದಿಢೀರ್ ದಾಳಿ ನಡೆಸಿ 200ಕ್ಕೂ ಅಧಿಕ ಬಾಕಿ ಕಡತಗಳನ್ನು ಪತ್ತೆಹಚ್ಚಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ 16 ಮಂದಿ ಸಿಬ್ಬಂದಿಯ ತಂಡ ಅಪರಾಹ್ನ ಸುಮಾರು 3 ಗಂಟೆಗೆ ಕಚೇರಿಗೆ ಆಗಮಿಸಿ ದಾಖಲೆಗಳ ಪರಿಶೀಲನೆ ಆರಂಭಿಸಿತು. ಕಾರ್ಯಾಚರಣೆ ರಾತ್ರಿ ತನಕ ಮುಂದುವರಿದಿದ್ದು, ಹಲವು ಕಡತಗಳನ್ನು ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ.

ಮೂಲಗಳ ಪ್ರಕಾರ, ಸಾಮಾನ್ಯವಾಗಿ 15ರಿಂದ 20 ದಿನಗಳೊಳಗೆ ವಿಲೇವಾರಿಯಾಗಬೇಕಾದ ಅನೇಕ ಅರ್ಜಿಗಳು ಮತ್ತು ಕಡತಗಳು ತಿಂಗಳುಗಟ್ಟಲೆ ಬಾಕಿ ಉಳಿದಿರುವ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಹಠಾತ್ ದಾಳಿ ನಡೆಸಿದ ವೇಳೆ ಸುಮಾರು 200ಕ್ಕೂ ಅಧಿಕ ಕಡತಗಳು ಅನಗತ್ಯವಾಗಿ ಬಾಕಿ ಇರಿಸಿರುವುದು ಬೆಳಕಿಗೆ ಬಂದಿದೆ.

ಕೆಲವು ಕಡತಗಳನ್ನು ಹಣದ ಬೇಡಿಕೆ ಅಥವಾ ಇತರ ಉದ್ದೇಶಗಳಿಗಾಗಿ ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿರಬಹುದೆಂಬ ಶಂಕೆಯೂ ವ್ಯಕ್ತವಾಗಿದ್ದು, ಈ ಕುರಿತು ಅಧಿಕಾರಿಗಳಿಂದ ಸವಿಸ್ತಾರ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ. ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್, ಬಾಕಿ ಉಳಿಸಿರುವ ಕಡತಗಳ ಹಿನ್ನೆಲೆ, ವಿಳಂಬಕ್ಕೆ ಕಾರಣಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಗತ್ಯವಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಲೋಕಾಯುಕ್ತರ ದಾಳಿ ಮುಂದುವರಿಯುವ ಸಾಧ್ಯತೆ ಇದ್ದು, ಇನ್ನಷ್ಟು ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.



