ಉಡುಪಿ : ಉಡುಪಿ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧನೆಯಾಗಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೃತ ದಾನಿಯಿಂದ ಯಕೃತ್ತಿನ (ಲಿವರ್) ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಜೀವ ರಕ್ಷಕ ಶಸ್ತ್ರಚಿಕಿತ್ಸೆ, ದುಃಖದ ನಡುವೆಯೂ ತಮ್ಮ ಪ್ರೀತಿಪಾತ್ರರ ಅಂಗಾಂಗ ದಾನ ಮಾಡಲು ಮುಂದಾದ ಒಂದು ಕುಟುಂಬದ ಮಹತ್ತರ ಮಾನವೀಯತೆಯಿಂದ ಸಾಧ್ಯವಾಯಿತು. ದಾನಿ ಕುಟುಂಬದ ಈ ನಿಸ್ವಾರ್ಥ ನಿರ್ಧಾರದಿಂದ ಮತ್ತೊಬ್ಬ ರೋಗಿಗೆ ಹೊಸ ಬದುಕಿನ ಆಶಾಕಿರಣ ದೊರೆತಿದೆ ಎಂದು ಆಸ್ಪತ್ರೆ ಆಡಳಿತವು ಕೃತಜ್ಞತೆಯೊಂದಿಗೆ ತಿಳಿಸಿದೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಡಾ. ಜಯಂತ್ ರೆಡ್ಡಿ, ದೀರ್ಘಕಾಲದ ಯಕೃತ್ತಿನ ಕಾಯಿಲೆ ಮತ್ತು ಪೋರ್ಟಲ್ ಹೈಪರ್ಟೆನ್ಷನ್ನಿಂದ ಬಳಲುತ್ತಿದ್ದ 56 ವರ್ಷದ ರೋಗಿಗೆ ಮೃತ ದಾನಿ ಕಸಿ ಕಾರ್ಯಕ್ರಮದಡಿ ಸಮಗ್ರ ಪರೀಕ್ಷೆ ನಡೆಸಿ, ಕಸಿ ಶಸ್ತ್ರಚಿಕಿತ್ಸೆ ಅಗತ್ಯವೆಂದು ತೀರ್ಮಾನಿಸಲಾಯಿತು. ಬಳಿಕ ಪರಿಣಿತ ವೈದ್ಯರ ತಂಡದ ಸಮನ್ವಯದಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ವಿಶೇಷ ಐಸಿಯುನಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆಯೊಂದಿಗೆ ಚಿಕಿತ್ಸೆ ನೀಡಿ, ರೋಗಿಯನ್ನು ಸ್ಥಿರ ಸ್ಥಿತಿಯಲ್ಲಿ ಬಿಡುಗಡೆ ಮಾಡಲಾಗಿದೆ. ಮೃತ ದಾನಿ ಲಿವರ್ ಕಸಿ ಯಶಸ್ಸು ಉತ್ತಮ ಕಸಿ ವ್ಯವಸ್ಥೆ ಹಾಗೂ ತಂಡದ ಬದ್ಧತೆಯನ್ನು ತೋರಿಸುತ್ತದೆ ಎಂದು ಡಾ. ಜಯಂತ್ ರೆಡ್ಡಿ ಅಭಿಪ್ರಾಯಪಟ್ಟರು.

ಈ ಕುರಿತು ಪ್ರತಿಕ್ರಿಯಿಸಿದ ಡಾ. ಶಿರನ್ ಶೆಟ್ಟಿ, ಮುಂದುವರಿದ ಯಕೃತ್ತಿನ ಕಾಯಿಲೆಗಳಲ್ಲಿ ಸಮಯೋಚಿತ ಗುರುತಿಸುವಿಕೆ ಮತ್ತು ಸರಿಯಾದ ಚಿಕಿತ್ಸೆ ಅತ್ಯಂತ ಮುಖ್ಯ. ಈ ಯಶಸ್ಸು ಕರಾವಳಿ ಕರ್ನಾಟಕದ ಜನತೆಗೆ ಸುಧಾರಿತ ಚಿಕಿತ್ಸೆ ಸೌಲಭ್ಯಗಳು ಹತ್ತಿರದಲ್ಲೇ ಲಭ್ಯವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು. ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಅವರು ಈ ಸಾಧನೆಯೊಂದಿಗೆ ಉಡುಪಿ ಜಿಲ್ಲೆಯಲ್ಲಿ ಅತ್ಯಾಧುನಿಕ ಯಕೃತ್ತಿನ ಆರೈಕೆ ಲಭ್ಯವಾಗಿದೆ. ಕಸಿ ಚಿಕಿತ್ಸೆಯನ್ನು ಹೆಚ್ಚು ಜನರಿಗೆ ಕೈಗೆಟುಕುವಂತೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ದೀಪ್ತಿ ರಾಮಚಂದ್ರ, ಡಾ. ಅವಿನಾಶ್ ಶೆಟ್ಟಿ, ಡಾ. ಸುಧಾಕರ್ ಕಂಟಿಪುಡಿ, ಡಾ. ಶಿರನ್ ಶೆಟ್ಟಿ, ಡಾ. ಜಯಂತ್ ರೆಡ್ಡಿ ಹಾಗೂ ಡಾ. ಭರತ್ ಭಟ್ ಉಪಸ್ಥಿತರಿದ್ದರು.



