ಉಡುಪಿ: ರಾಜ್ಯ ಸರ್ಕಾರದ ಆದೇಶದಂತೆ ಹೊಸ ಪೀಕ್ ಕ್ಯಾಪ್ ಗಳ ವಿತರಣೆ ಪ್ರಕ್ರಿಯೆ ರಾಜ್ಯಾದ್ಯಂತ ಆರಂಭಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಕೂಡ ಪೊಲೀಸ್ ಸಿಬ್ಬಂದಿಗೆ ಹೊಸ ಕ್ಯಾಪ್ಗಳನ್ನು ಹಸ್ತಾಂತರಿಸುವ ಕಾರ್ಯ ಶುರುವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಸಾಂಕೇತಿಕವಾಗಿ ಪೀಕ್ ಕ್ಯಾಪ್ಗಳನ್ನು ವಿತರಿಸಿದರು.

ಜಿಲ್ಲೆಯಲ್ಲಿನ ಸುಮಾರು 1,400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಗೆ ಹಂತ ಹಂತವಾಗಿ ಕ್ಯಾಪ್ಗಳನ್ನು ನೀಡಲಾಗುತ್ತಿದೆ. ಇದುವರೆಗೆ ಸುಮಾರು 200 ಪೀಕ್ ಕ್ಯಾಪ್ಗಳು ಜಿಲ್ಲೆಗೆ ತಲುಪಿದ್ದು, ಅವುಗಳ ವಿತರಣೆ ಕಾರ್ಯ ಪ್ರಗತಿಯಲ್ಲಿ ಇದೆ. ಉಳಿದ ಕ್ಯಾಪ್ಗಳು ಮುಂದಿನ ಹಂತಗಳಲ್ಲಿ ಬರಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲು ಕಾನ್ಸ್ಟೆಬಲ್ ಹಾಗೂ ಹೆಡ್ ಕಾನ್ಸ್ಟೆಬಲ್ ಗಳು ಸ್ಲೋಚ್ ಕ್ಯಾಪ್ ಬಳಸಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಆ ಕ್ಯಾಪ್ ಪ್ರತಿಭಟನೆ, ಬ್ಯಾರಿಕೇಡ್ ಡ್ಯೂಟಿ, ಸಾರ್ವಜನಿಕ ಕಾರ್ಯಕ್ರಮಗಳು ಮುಂತಾದ ಸಂದರ್ಭದಲ್ಲಿ ಪದೇ ಪದೇ ಜಾರುವ ಸಮಸ್ಯೆ ಉಂಟಾಗುತ್ತಿದ್ದು, ಕರ್ತವ್ಯ ನಿರ್ವಹಣೆಗೆ ತೊಂದರೆಯನ್ನುಂಟು ಮಾಡುತ್ತಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ವಿನ್ಯಾಸದ, ಉತ್ತಮ ಹೊಲಪು ಮತ್ತು ಸುಧಾರಿತ ಬಲವಾದ ಪೀಕ್ ಮಾದರಿಯ ಕ್ಯಾಪ್ಗಳನ್ನು ಪರಿಚಯಿಸಿ ಹಸ್ತಾಂತರಿಸುವ ಕ್ರಮ ಕೈಗೊಂಡಿದೆ.

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಿತರಣೆ ಪೂರ್ಣಗೊಂಡಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಹಂತ ಹಂತವಾಗಿ ವಿತರಣೆ ನಡೆಯುತ್ತಿದೆ. ಉಡುಪಿಯಲ್ಲಿ ಆರಂಭವಾದ ಈ ಪ್ರಕ್ರಿಯೆಯಿಂದ ಪೊಲೀಸರು ಹೆಚ್ಚು ಸುಗಮ ಹಾಗೂ ವೃತ್ತಿಪರ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಆಶಿಸಿದ್ದಾರೆ.



