ಉಡುಪಿ : ಉಡುಪಿ ಚಿಟ್ಟಾಣಿ ಅಭಿಮಾನಿ ಬಳಗದ ಆಯೋಜನೆಯಲ್ಲಿ ನಡೆದ ಹದಿನೆಂಟನೇ ವರ್ಷದ ಚಿಟ್ಟಾಣಿ ಸಪ್ತಾಹ ಕಾರ್ಯಕ್ರಮವನ್ನು ಸಪ್ತಾಹವನ್ನು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರು ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶ್ರೀಗಳು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸ್ಮರಣಾರ್ಥವಾಗಿ ನಡೆಯುತ್ತಿರುವ ಈ ಸಪ್ತಾಹವು ಕಿರಿಯ ಕಲಾವಿದರಿಗೆ ಪ್ರೇರಣೆಯಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ದಿವ್ಯಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಅಧ್ಯಕ್ಷ ಸೀತಾರಾಮ ತೋಳ್ಪಡಿತ್ತಾಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ತಿಕ ಚಿಟ್ಟಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಂ. ಗೋಪಿಕೃಷ್ಣ ರಾವ್ ಸ್ವಾಮೀಜಿಯವರಿಗೆ ಫಲವಸ್ತು ಸಮರ್ಪಿಸಿದರು. ಕಾರ್ಯಕ್ರಮವನ್ನು ಮುರಳಿ ಕಡೆಕಾರ್ ಸಂಯೋಜಿಸಿದ್ದರು ಮತ್ತು ನಾರಾಯಣ ಎಂ. ಹೆಗಡೆ ನಿರೂಪಿಸಿದರು. ಸಪ್ತಾಹದ ಮೊದಲ ಪ್ರದರ್ಶನವಾಗಿ ಕವಿ ಗಣೇಶ ಕೊಲೆಕಾಡಿ ಅವರ “ಸಮರ ಸೌಗಂಧಿಕಾ” ಯಕ್ಷಗಾನ ಪ್ರಸ್ತುತಗೊಂಡಿತು.


