ಉಡುಪಿ : ಎಸ್ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇದರ ಕ್ರೀಡಾ ವಿಭಾಗವು ಆಂತರಿಕ ಗುಣಮಟ್ಟ ಕ್ಷಮತೆ ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಮುಂದುವರೆದ ವೈದ್ಯಕೀಯ ಶಿಕ್ಷಣ (ಸಿ.ಎಂ.ಇ) ಕಾರ್ಯಕ್ರಮವನ್ನು ಆಯೋಜಿಸಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಆರೋಗ್ಯ ವೃತ್ತಿಪರರು ಹಾಗೂ ಕ್ರೀಡಾ ಆಸಕ್ತರು ಭಾಗವಹಿಸಿ, ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ವಿಧಾನಗಳ ಸಮನ್ವಯದ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಂಭವಿಸುವ ರೋಗಗಳು ಮತ್ತು ಗಾಯಗಳಿಗೆ ಸಮಗ್ರ ಚಿಕಿತ್ಸೆ ಕುರಿತು ಚರ್ಚೆ ನಡೆಸಿದರು.

ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ಉಪ ಪ್ರಾಂಶುಪಾಲರಾದ ಡಾ. ನಿರಂಜನ್ ರಾವ್, ಡಾ. ನಾಗರಾಜ್ ಎಸ್., ವೈದ್ಯಕೀಯ ಅಧೀಕ್ಷಕರಾದ ಡಾ. ಜಯಕೃಷ್ಣ ನಾಯಕ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಡಾ. ನಿರಂಜನ್ ರಾವ್ ಅವರು ಕ್ರೀಡಾ ವೈದ್ಯಕೀಯ ಕ್ಷೇತ್ರದಲ್ಲಿ ಆಯುರ್ವೇದ ಪಂಚಕರ್ಮ ಹಾಗೂ ಭೌತಚಿಕಿತ್ಸೆಯ ಮಹತ್ವವನ್ನು ಒತ್ತಿ ಹೇಳಿದರು.ಕಾರ್ಯಕ್ರಮದ ಅಂಗವಾಗಿ ಕ್ರೀಡೆ ಮತ್ತು ಫಿಟ್ನೆಸ್ನ ಅಗತ್ಯತೆಗಳು ವಿಷಯದ ಕುರಿತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಪ್ರಾಂಶುಪಾಲರಾದ ಡಾ. ಮಧು ಜಿ.ಆರ್ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಶಲ್ಯಾತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀ ಆರ್. ನಾಯರ್ ಅವರು ಕ್ರೀಡೆಯಿಂದ ಉಂಟಾಗುವ ಗಾಯಗಳು ಮತ್ತು ಅದರ ಆಯುರ್ವೇದೀಯ ಪರಿಹಾರೋಪಾಯಗಳು ಕುರಿತು ಉಪನ್ಯಾಸ ನೀಡಿದರು. ಡಾ. ಕೊಚುಥ್ರೆಸಿಯಾ ಜೋಸ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಅನೀಶ್ ಅವರು ಸಂವಾದಾತ್ಮಕ ಅಧಿವೇಶನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಡಾ. ಮೊಹಮ್ಮದ್ ಫೈಸಲ್ ಸ್ವಾಗತಿಸಿದರು, ಡಾ. ಮೇಘನಾ ಕಾರ್ಯಕ್ರಮ ನಿರೂಪಿಸಿದರು. ಡಾ. ಸುಶ್ಮಿತಾ ವಂದಿಸಿದರು.



