ಉಡುಪಿ : ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಹಳ್ಳಿಗಳನ್ನು ಸೇರಿಸಲಾಗಿದೆ, ಇದನ್ನು ಕೈ ಬಿಡಬೇಕು ಎಂದು ಬೈಂದೂರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಇಂದು ಉಗ್ರ ರೂಪ ಪಡೆದುಕೊಂಡಿದೆ. ಇಂದು ಬೈಂದೂರು ನಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ನೂರಾರು ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಹಸಿರು ಶಾಲು ಬೀಸುತ್ತಾ ಜಿಲ್ಲಾಧಿಕಾರಿ ಕಛೇರಿ ಬಳಿ ಮೆರವಣಿಗೆಯಲ್ಲಿ ಬಂದ ರೈತರು, ಜಿಲ್ಲಾಧಿಕಾರಿ ಕಛೇರಿಯ ಆವರಣ ಬಳಿ ಮಲಗಿ ಅಕ್ರೋಶ ಹೊರಹಾಕಿದ್ದಲ್ಲದೇ, ಹಡಿ ಮಂಚಕ್ಕೆ ಭತ್ತದ ಪೈರು ಬಡಿದು ಭತ್ರ ಬೇರ್ಪಡಿಸುವ ಮೂಲಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ , ಹಳ್ಳಿಗಳನ್ನು, ಅರಣ್ಯ ಪ್ರದೇಶಗಳನ್ನು ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಹಳ್ಳಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಕೈಬಿಡುವವರೆಗೂ ನಾವು ಯವುದೇ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಭಾವಹಿಸುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಬೈಂದೂರಿನಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.

5 ವರ್ಷಗಳ ಹಿಂದೆ ಬೈಂದೂರು ಪುರಸಭೆಯನ್ನು ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಈವರೆಗೂ ಚುನಾವಣೆ ನಡೆದಿಲ್ಲ. ಹೀಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ, ಅಲ್ಲದೆ ಬೈಂದೂರು ಪಟ್ಟಣ ವ್ಯಾಪ್ತಿ ಬಿಟ್ಟು ಗ್ರಾಮಾಂತರ ಪ್ರದೇಶಗಳು, ಅರಣ್ಯ ಪ್ರದೇಶಗಳನ್ನೂ ಸೇರಿಸಿಕೊಂಡಿರುವುದರಿಂದ ಗ್ರಾಮಾಂತರ ಪ್ರದೇಶದ ರೈತರು ನಾನಾ ಇಲಾಖೆಗಳಿಂದ ಸಿಗುವ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಬಗ್ಗೆ ಸಂಘ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಸರಕಾರದ ಪ್ರಸ್ತಾವಿತ ಯೋಜನೆಯಲ್ಲಿ 20 ವಾರ್ಡ್ಗಳನ್ನು ರಚಿಸಲಾಗಿದ್ದು, ಅದರಲ್ಲಿ ಗ್ರಾಮಾಂತರ ಪ್ರದೇಶವನ್ನು ಸೇರಿಸಿಕೊಂಡ 9 ವಾರ್ಡ್ಗಳನ್ನು ರಚಿಸಲಾಗಿದೆ. ಈ ನಡುವೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಪಟ್ಟಣ ಪಂಚಾಯಿತಿಯ ಸರ್ವೆ ನಡೆಸಿ 11 ವಾರ್ಡ್ಗಳನ್ನು ರಚಿಸಿ ಸರಕಾರದ ಅನುಮೋದನೆಗೆ ಸಲ್ಲಿಸಿತ್ತು. ಆದರೆ ಸರಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ಪ್ರತಿಭಟನೆಯ ಮೂಲಕ ನಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಅರುಣ್ ಕುಮಾರ್, ವೀರಭದ್ರ ಗಾಣಿಗ, ಕೃಷ್ಣ ದೇವಾಡಿಗ, ಮ್ಯಾಥ್ಯು, ನಾಗರಾಜ್ ಮರಾಠೆ ಮತ್ತಿತರರು ಉಪಸ್ಥಿತರಿದ್ದರು.
