ಉಡುಪಿ : ನಾಲಾಯಕ ಸಚಿವರು ಆರ್‌ಎಸ್‌ಎಸ್ ವಿರುದ್ಧ ಟೀಕಿಸಲು ದಾರ್ಷ್ಟ್ಯ ಪ್ರದರ್ಶನ ಮಾಡಿದ್ದಾರೆ. ಆರ್‌ಎಸ್‌ಎಸ್ ಹೆಸರು ತೆಗೆದರೆ ಮಾಧ್ಯಮ ಪ್ರಚಾರ ಸಿಗುತ್ತದೆ ಎಂಬ ಉದ್ದೇಶ ಅವರದು. ಆದರೆ ಆರ್‌ಎಸ್‌ಎಸ್ ಎಂದರೆ ಸೇವೆ, ದೇಶಭಕ್ತಿ ಮತ್ತು ಶಿಸ್ತು. ಇಂದಿರಾ ಗಾಂಧಿಗೆ ಹೆದರದ, ನೆಹರು ಮುಂದೆ ಮಂಡಿಯೂರದ ಸಂಘವನ್ನು ಇವರಂತಹವರು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅಕ್ರೋಶ ವ್ಯಕ್ತಪಡಿಸಿದರು.

ಅವರು ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿ, ಗ್ರಾಮೀಣಾಭಿವೃದ್ಧಿ ಇಲಾಖೆ ಕಳೆದ ಎರಡೂವರೆ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದೆ. ಪ್ರಿಯಾಂಕ್ ಖರ್ಗೆ ತಮ್ಮ ಖಾತೆ ನಿಭಾಯಿಸಲಾರದ ವಿಫಲ ಸಚಿವರು. ನಾನೊಬ್ಬ ಸಚಿವ ಎಂದು ತೋರಿಸಿಕೊಳ್ಳಲು ಅವರು ಪದೇ ಪದೇ ಮಾಧ್ಯಮದ ಮುಂದೆ ಬರುತ್ತಾರೆ, ಇಂತಹ ವಿಷಯಗಳನ್ನು ಪ್ರಸ್ತಾಪಿಸುವುದು ಪ್ರಿಯಾಂಕ್ ಖರ್ಗೆಯ ಚಟವಾಗಿದೆ. ರಾಜ್ಯದ ಗ್ರಾಮೀಣ ರಸ್ತೆಗಳು ಹಾಳಾಗಿವೆ, ಎಲ್ಲೆಡೆ ಗುಂಡಿ ಬಿದ್ದಿವೆ ಇದರ ಹೊಣೆಗಾರ ಖರ್ಗೆಯವರು. ಅವರ ಆಡಳಿತದಲ್ಲಿ ಒಂದು ಕಿಲೋಮೀಟರ್ ಹೊಸ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಅನುದಾನವಿಲ್ಲ, ಹೊಸ ಪಿಡಿಒ ನೇಮಕಾತಿಯೂ ಇಲ್ಲ ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆಯ ತಂದೆ ಗೃಹಸಚಿವರಾಗಿದ್ದಾಗ ಏನೂ ಮಾಡಲು ಸಾಧ್ಯವಾಗಲಿಲ್ಲ. ಖರ್ಗೆ ಸ್ವತಃ ಏನು ಮಾಡಬಲ್ಲರು? ಅವರು ಶಾಶ್ವತ ಅಲ್ಲ, ಅವರ ಅಧಿಕಾರವೂ ಶಾಶ್ವತ ಅಲ್ಲ. ಆದರೆ ಆರ್‌ಎಸ್‌ಎಸ್ ಮತ್ತು ಅದರ ವಿಚಾರ ಶಾಶ್ವತ. ಈ ಸರ್ಕಾರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವುದಿಲ್ಲ. 80 ಶೇಕಡಾ ಭ್ರಷ್ಟಾಚಾರವನ್ನು ಮರೆಮಾಚಲು ವಿವಾದ ಸೃಷ್ಟಿಸುತ್ತಿದೆ ಎಂದು ವ್ಯಂಗ್ಯವಾಡಿದರು.