ಉಡುಪಿ : ಕಳೆದ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೂಲ್ಕಿ ಸಮೀಪದ ಶಾಲಿನಿ ನಿವಾಸಿ ಅಭಿಜಿತ್ (34) ಎಂದು ಗುರುತಿಸಲಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿತ್ತು. ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ ಹಾಗೂ ಕಾಪು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ, ಕಾಪು ಪೊಲೀಸ್ ಠಾಣೆ ಉಪನಿರೀಕ್ಷಕ ತೇಜಸ್ವಿ ಹಾಗೂ ಪಿಎಸ್ಐ (ತನಿಖೆ) ಶುಭಕರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೇ 15ರಂದು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಂಧಿತನ ವಿರುದ್ಧ ಮೈಸೂರು ನರಸಿಂಹರಾಜಪುರ ಪೊಲೀಸ್ ಠಾಣೆ ಹಾಗೂ ಬಜ್ಪೆ ಪೊಲೀಸ್ ಠಾಣೆ ಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಮೇ 15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮೇ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.



