ಉಡುಪಿ: ಉದ್ಯಾವರದ ಮಹಿಳೆಯೊಬ್ಬರಿಗೆ ‘ಆನ್ಲೈನ್ ವರ್ಕ್ ಫ್ರಮ್ ಹೋಮ್’ ಕೆಲಸದ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಾವರದ ವಿಜಯಲಕ್ಷ್ಮೀ (55) ಅವರು ನವೆಂಬರ್ 29ರಂದು ಫೇಸ್ಬುಕ್ನಲ್ಲಿ ಕಾಣಿಸಿಕೊಂಡ ವರ್ಕ್ ಫ್ರಮ್ ಹೋಮ್ ಜಾಹೀರಾತಿಗೆ ಕ್ಲಿಕ್ ಮಾಡಿದ್ದರು. ಇದರ ನಂತರ ಅವರ ವಾಟ್ಸಾಪ್ ಸಂಖ್ಯೆಗೆ ಸಂದೇಶ ಬಂದು, ತಾನು ಕಂಪನಿಯ ಎಚ್ಆರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಪಾರ್ಟ್ ಟೈಮ್ ಟಾಸ್ಕ್ ಮಾಡುವ ಆಸಕ್ತಿ ಇದ್ದರೆ ಫಾರ್ಮ್ ತುಂಬಿಸಲು ಕೋರಿದ್ದನು. ನಂತರ ಆರೋಪಿ ವೈವಿಧ್ಯಮಯ ಲಿಂಕ್ಗಳನ್ನು ಕಳುಹಿಸಿ, ಅದರಲ್ಲಿ ಟಾಸ್ಕ್ಗಳನ್ನು ಪೂರ್ಣಗೊಳಿಸಿದರೆ ಹಣ ಜಮಾ ಆಗುತ್ತದೆ ಎಂದು ನಂಬಿಸಿದ್ದರು. ಪ್ರಾರಂಭಿಕ ಹಂತಗಳಲ್ಲಿ ಸ್ವಲ್ಪ ಮೊತ್ತ ಹಾಕಿರುವಂತೆ ತೋರಿಸಿ ವಿಶ್ವಾಸ ಮೂಡಿಸಿದ ಆರೋಪಿಗಳು ಡಿಸೆಂಬರ್ 1ರಂದು ಮತ್ತೊಂದು ಲಿಂಕ್ ಕಳುಹಿಸಿದ್ದರು. ಅದನ್ನು ಒತ್ತಿದಾಗ ಟೆಲಿಗ್ರಾಂ ಖಾತೆ ತೆರೆಯಲ್ಪಟ್ಟು, ಇಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಿದ್ದರು.

ಅದನ್ನು ನಂಬಿದ ವಿಜಯಲಕ್ಷ್ಮೀ, ಆರೋಪಿತರ ಸೂಚನೆಯಂತೆ ಡಿಸೆಂಬರ್ 1ರಿಂದ 4ರವರೆಗೆ ಒಟ್ಟು 31,00,067 ರೂಪಾಯಿ ಹಣವನ್ನು ವರ್ಗಾಯಿಸಿದ್ದರು. ಆದರೆ ಬಳಿಕ ಹೂಡಿಕೆ ಹಣವನ್ನಾಗಲೀ, ಲಾಭಾಂಶವನ್ನಾಗಲೀ ನೀಡದೆ ಆರೋಪಿತರು ಸಂಪರ್ಕ ಕಡಿತಗೊಳಿಸಿದ್ದು, ವಂಚನೆ ಮಾಡಿದ್ದಾರೆ. ಈ ಕುರಿತು ವಿಜಯಲಕ್ಷ್ಮೀ ಅವರು ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



