ಉಡುಪಿ : ಉಡುಪಿ ತಾಲೂಕಿನ ದೊಡ್ಡಣಗುಡ್ಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವ ಸಾಂಪ್ರದಾಯಿಕ ಹಾಗೂ ವಿನೂತನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಿತು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳನ್ನು ಜಾಥಾ ಮೂಲಕ ಶಾಲೆಗೆ ಕರೆತರಲಾಯಿತು. ಬಳಿಕ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಆರತಿ ಎತ್ತುವ ಮೂಲಕ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕೈಗಳನ್ನು ಅರಿಶಿನ-ಕುಂಕುಮದ ನೀರಿನಲ್ಲಿ ಅದ್ದಿಸಿ, ಗೋಡೆಯ ಮೇಲೆ ಅಳವಡಿಸಲಾಗಿದ್ದ ಬಿಳಿ ಹಾಳೆಯ ಮೇಲೆ ಕೈಅಚ್ಚು ಮೂಡಿಸಲಾಯಿತು. ಈ ವಿಶಿಷ್ಟ ಕಾರ್ಯಕ್ರಮ ಮಕ್ಕಳಲ್ಲಿ ವಿಶೇಷ ಉತ್ಸಾಹ ಮೂಡಿಸಿತು. ನಂತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಿದ್ಧಪಡಿಸಲಾಗಿದ್ದ ಸೆಲ್ಫಿ ಕಾರ್ನರ್ನಲ್ಲಿ ಮಕ್ಕಳು ಛಾಯಾಚಿತ್ರಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಜಾಹಿದಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಹಿತ್ ಕರಂಬಳ್ಳಿ, ನಿಕಟಪೂರ್ವ ಅಧ್ಯಕ್ಷ ಪರೀಕ್ಷಿತ್ ಶೆಟ್, ಶಾಲೆಯ ದಾನಿ ಕೆ.ಎಂ. ಉಡುಪ ಅವರ ಧರ್ಮಪತ್ನಿ ಶಾಂತಾ ಉಡುಪ, ಜಯಂಟ್ಸ್ ಗ್ರೂಪ್ ಅಧ್ಯಕ್ಷ ವಿನಯಕುಮಾರ್ ಪೂಜಾರಿ, ಗೃಹ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಸದಸ್ಯ ರಾಮ ಭಟ್ ಹಾಗೂ ಒನ್ ಗುಡ್ ಸ್ಟೆಪ್ ಸಂಸ್ಥೆಯ ಸೃಜನ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ರಮಣಿ ವಂದಿಸಿದರು.



ಒಂದು ಹಂತದಲ್ಲಿ ಕೇವಲ ಒಂಬತ್ತು ವಿದ್ಯಾರ್ಥಿಗಳೊಂದಿಗೆ ಮುಚ್ಚುವ ಭೀತಿಯಲ್ಲಿದ್ದ ಈ ಶಾಲೆ ಇದೀಗ ಪುನಶ್ಚೇತನಗೊಂಡಿದೆ. ಮುಖ್ಯ ಶಿಕ್ಷಕಿ ನಿರ್ಮಲಾ ಅವರ ನೇತೃತ್ವದಲ್ಲಿ ಮನೆ-ಮನೆ ಭೇಟಿ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ 35 ಹೊಸ ವಿದ್ಯಾರ್ಥಿಗಳು ದಾಖಲಾತಿಯಾಗಿದ್ದಾರೆ. ಇದರೊಂದಿಗೆ ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಹಳೆ ವಿದ್ಯಾರ್ಥಿ ಸಂಘದ ಸಹಕಾರ ಹಾಗೂ ಶಾಲಾ ಶಿಕ್ಷಕರ ನಿರಂತರ ಪ್ರಯತ್ನದಿಂದ ಸರ್ಕಾರಿ ಶಾಲೆಯ ದಾಖಲಾತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.



