ಉಡುಪಿ : ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚತುರ್ಥ ಪರ್ಯಾಯಾವಧಿ ಪೂರ್ಣಗೊಳಿಸಿದ ಬಳಿಕ ಮೊದಲ ಬಾರಿಗೆ ಅಮೆರಿಕಾಗೆ ಭೇಟಿ ನೀಡಿದ್ದು, ನ್ಯೂಜೆರ್ಸಿಯ ಎಡಿಸನ್‌ನಲ್ಲಿರುವ ಶ್ರೀಕೃಷ್ಣ ವೃಂದಾವನದಲ್ಲಿ ಅವರಿಗೆ ಭವ್ಯ ಪುರಪ್ರವೇಶ ಹಾಗೂ ಪೌರ ಸನ್ಮಾನ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಅಧಿಕ ಮಾಸದ ಪರ್ವಕಾಲದಲ್ಲಿ ಪೂರ್ವ ಕರಾವಳಿಯ ಭಕ್ತರು ಶ್ರೀಗಳ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದು, ಅವರ ಭೇಟಿ ಭಕ್ತರಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಸುಮಾರು 500ಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ನಡೆದ ಪುರಪ್ರವೇಶ ಕಾರ್ಯಕ್ರಮದಲ್ಲಿ ಕುದುರೆ ಸಾರೋಟು, ಪೂರ್ಣಕುಂಭ, ವೇದಘೋಷ, ಸ್ಯಾಕ್ಸೋಫೋನ್, ಕೊಳಲು, ಡೋಲಕ ಹಾಗೂ ಕೋಲಾಟ ನೃತ್ಯದೊಂದಿಗೆ ಶ್ರೀಗಳನ್ನು ಶ್ರೀಕೃಷ್ಣ ವೃಂದಾವನಕ್ಕೆ ಬರಮಾಡಿಕೊಳ್ಳಲಾಯಿತು. ಶಾಲಗ್ರಾಮ ಶಿಲಾರೂಪಿ ಶ್ರೀಕೃಷ್ಣನ ದರ್ಶನ ಪಡೆದು ಆರತಿ ಸಲ್ಲಿಸಿದ ಬಳಿಕ ಶ್ರೀಗಳು ಸಭಾಂಗಣಕ್ಕೆ ಆಗಮಿಸಿದರು. ವೇದಘೋಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಸಭೆಯಲ್ಲಿ ಶ್ರೀಗಳಿಗೆ ಪೌರ ಸನ್ಮಾನ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯೂಜೆರ್ಸಿಯ ಮೊಂಟ್‌ಗೊಮೆರಿ ಪಟ್ಟಣದ ಮೇಯರ್ ನೀನಾ ಸಿಂಗ್ ಹಾಗೂ ಅವರ ಪತಿ ಪರಂಜಿತ್ ಸಿಂಗ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದರು. ಮೇಯರ್ ನೀನಾ ಸಿಂಗ್ ಅವರು ಸನ್ಮಾನ ಪತ್ರ ವಾಚಿಸಿ ಶ್ರೀಗಳಿಗೆ ಗೌರವ ಸಮರ್ಪಿಸಿದರು. ಭಕ್ತರ ಪರವಾಗಿ ಡಾ. ಸುಧೀಂದ್ರ, ಪೂರ್ಣಿಮಾ, ಉದ್ಯಮಿ ಸುರೇಶ್ ವಸಿಷ್ಠ, ಮೀನಾ ವಸಿಷ್ಠ ಹಾಗೂ ಚೇತನ್ ಭರ್ಗಿರಿ ಅವರು ಶ್ರೀಗಳಿಗೆ ಶಾಲು, ಹಾರ ಹಾಗೂ ಪೇಟ ತೊಡಿಸಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ನ್ಯೂಜೆರ್ಸಿ ಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಯಜ್ಞಶಾಲೆ ಯೋಜನೆಯ ಕುರಿತು ಮಾಹಿತಿ ನೀಡಲಾಯಿತು. ಸುಮಾರು 10 ಲಕ್ಷ ಡಾಲರ್ ವೆಚ್ಚದ ಈ ಯೋಜನೆಗೆ ಈಗಾಗಲೇ 5 ಲಕ್ಷ ಡಾಲರ್‌ಗೂ ಅಧಿಕ ದೇಣಿಗೆ ಸಂಗ್ರಹವಾಗಿದ್ದು, ಉಳಿದ ಕಾರ್ಯಗಳಿಗಾಗಿ ಭಕ್ತರಲ್ಲಿ ಸಹಕಾರ ಕೋರಲಾಯಿತು.

ಕಾರ್ಯಕ್ರಮದ ಬಳಿಕ ಭಜನೆ, ಚಾಮರ ಸೇವೆ, ಮಹಾಪೂಜೆ, ಶ್ರೀಗಳ ಆಶೀರ್ವಚನ ಹಾಗೂ ಪ್ರಸಾದ ವಿತರಣೆ ನಡೆಯಿತು. ಮರುದಿನ ಅಧಿಕ ಮಾಸದ ಪ್ರಯುಕ್ತ ಭಕ್ತರಿಗೆ ತಪ್ತಮುದ್ರಾಧಾರಣೆ ಕಾರ್ಯಕ್ರಮವೂ ನೆರವೇರಿತು.



