ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಪೂರ್ಣಪ್ರಜ್ಞ ಕಾಲೇಜು, (ಸ್ವಾಯತ್ತ) ಉಡುಪಿ, ವಿಶೇಷವಾಗಿ ನಿರ್ಮಿಸಲಾದ ಶ್ರೀ ವಿಬುಧೇಶತೀರ್ಥ ಒಳಾಂಗಣ ಕ್ರೀಡಾಂಗಣದಲ್ಲಿ 2024-25ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಕೂಟವನ್ನು ಎ.9 ರಿಂದ 12 ರವರೆಗೆ ಆಯೋಜಿಸಿದೆ. ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಮಾಹಿತಿಯನ್ನು ವಿವರಿಸಿದರು.
ಎ.9 ರಂದು ಬೆಳಗ್ಗೆ 10.30ಕ್ಕೆ ಅದಮಾರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥರು ಪಂದ್ಯಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಮಂಗಳೂರು ವಿ.ವಿ. ಉಪಕುಲಪತಿ ಪ್ರೋ. ಪಿ.ಎಲ್.ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಅದಮಾರು ಮಠ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ಪಿ.ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್, ಗೌರವ ಖಜಾಂಜಿ ಸಿ.ಎ., ಪ್ರಶಾಂತ್ ಹೊಳ್ಳ, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಕಿಶೋರ್ ಕುಮಾರ್ ಸಿ.ಕೆ., ಪ್ರಾಂಶುಪಾಲ ಡಾ. ರಾಮು ಎಲ್, ತಮಿಳುನಾಡು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ, ಕರ್ಣಾಟಕ ಬ್ಯಾಂಕಿನ ಸಿಇಓ ಕೃಷ್ಣನ್ ಹೆಚ್ ಉಪಸ್ಥಿತರಿರಲಿದ್ದಾರೆ.
ಎ.12 ರಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥರು ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ವಿ.ವಿ. ಕುಲಸಚಿವ ರಾಜುಮೊಗವೀರ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ವಿನಯಕುಮಾರ್ ಸೊರಕೆ, ಉದ್ಯಮಿ ಪ್ರಸಾದರಾಜ್ ಕಾಂಚನ್, ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಗೌರವ ಖಜಾಂಜಿ ಸಿ.ಎ.ಪ್ರಶಾಂತ್ ಹೊಳ್ಳ, ಪೂರ್ಣಪ್ರಜ್ಞ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಶ್ರೀರಮಣ ಐತಾಳ್, ಅದಮಾರು ಮಠ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಶ್ರೀಧರ್ ರಾವ್, ಗೌರವ ಖಜಾಂಜಿ ಸಿ.ಎ.ಗಣೇಶ್ ಹೆಬ್ಬಾರ್, ಪ್ರಾಂಶುಪಾಲ ಡಾ.ರಾಮು ಎಲ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಉಪಸ್ಥಿತರಿರುವರು. ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಖೋ-ಖೋ ಪಂದ್ಯಾಕೂಟವು ‘ಜರ್ಮನ್ ಹ್ಯಾಂಗರ್ ತಂತ್ರಜ್ಞಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶ್ರೀ ವಿಬುಧೇಶತೀರ್ಥರ ಒಳಾಂಗಣ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಮೈದಾನವನ್ನು ತಯಾರಿಸಲಾಗಿದೆ. ದಿನಕ್ಕೆ 12 ಪಂದ್ಯಾಟಗಳು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ನಡೆಯಲಿದೆ. 3 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಪಂದ್ಯಾಕೂಟದಲ್ಲಿ ಒಟ್ಟು ಆಯ್ದ 16 ತಂಡಗಳು ಭಾಗವಹಿಸುತ್ತಿದ್ದು ದಕ್ಷಿಣ ವಲಯದಿಂದ ನಾಲ್ಕು ತಂಡವು (ಕರ್ನಾಟಕದ ಮಂಗಳೂರು ವಿವಿ, ದಾವಣಗೆರೆ ವಿವಿ, ತಮಿಳುನಾಡಿನ ಭಾರತಿಯಾರ್ ವಿವಿ ಕೊಯಮುತ್ತೂರು, ಕೇರಳ ವಿವಿ ತಿರುವನಂತಪುರ) ಪಶ್ಚಿಮ ವಲಯದಿಂದ ನಾಲ್ಕು ತಂಡಗಳು (ಎಸ್.ಆರ್.ಟಿ.ಎಮ್. ಯು ನಾಂದೆಡ್ ಮಹಾರಾಷ್ಟ್ರ, ಬಿ.ಎ.ಎಮ್.ಯು. ಸಂಬಾಜಿ ನಗರ ಮಹಾರಾಷ್ಟ್ರ, ಮುಂಬಯಿ ವಿ.ವಿ., ಸಾವಿತ್ರಿ ಬಾಯಿ ಪುಲೆ ವಿ.ವಿ. ಪುಣೆ) ಉತ್ತರ ವಲಯದ ನಾಲ್ಕು ತಂಡಗಳು (ಸಿ.ಎಸ್.ಜೆ.ಎಮ್.ಯು. ಕಾನ್ಸುರ, ಉತ್ತರ ಪ್ರದೇಶ, ಎಲ್.ಪಿ.ಯು. ಜಲಂದರ್ ಪಂಜಾಬ್, ದೆಹಲಿ ವಿ.ವಿ.. ಜಿ.ಎನ್.ಡಿ.ಯು. ಅಮೃತಸರ ಪಂಜಾಬ್), ಪೂರ್ವ ವಲಯದ ನಾಲ್ಕು ತಂಡಗಳು (ಕೆ.ಐ.ಐ.ಟಿ ಭುವನೇಶ್ವರ ಒಡಿಸ್ಸಾ, ಹೇಮಚಂದಯಾದವ ವಿ.ವಿ. ಚತ್ತೀಸ್ಗಡ್. ಗಂಗಾಧರ ಮೆಹರ್ ವಿ.ವಿ. ಒಡಿಸ್ಸಾ, ಪಂಡಿತ್ ರವಿಶಂಕರ ಶುಕ್ಲ ವಿ.ವಿ. ಚತ್ತೀಸ್ಗಡ್) ಒಳಗೊಂಡಿವೆ. ಪಂದ್ಯಾಟಗಳು ಲೀಗ್ / ನಾಕೌಟ್ ಆಧಾರದಲ್ಲಿ ನಡೆಯಲಿದ್ದು ಭಾರತದ ವಿವಿಧ ಭಾಗಗಳಿಂದ 20 ಅಧಿಕಾರಿಗಳು ಪಂದ್ಯಾಕೂಟದಲ್ಲಿ ಹಾಜರಿರುವರು. ಕ್ರೀಡಾಕೂಟದ ಯಶಸ್ವಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಪಂದ್ಯಾಟದ ಐದು ದಿನಗಳು ಅಧಿಕಾರಿಗಳು, ಆಟಗಾರರು, ತಂಡದ ನಿರ್ವಾಹಕರು ಮತ್ತು ತರಬೇತಿದಾರರಿಗಾಗಿ ಉಚಿತವಾಗಿ ವಸತಿ, ಊಟ ( ಸೌತ್ & ನಾರ್ತ್ ಇಂಡಿಯನ್) ಹಾಗು ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಉಪಸ್ಥಿತರಿದ್ದರು.