ಉಡುಪಿ : ಉಡುಪಿ ಜಿಲ್ಲೆಯ ಶಿರ್ವ ಸಮೀಪ ಅಕ್ರಮ ಲ್ಯಾಟ್‌ರೈಟ್ ಕಲ್ಲು ಸಾಗಾಟದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲಾಖೆಯ ಪರವಾನಿಗೆ ಇಲ್ಲದೇ ಲ್ಯಾಟ್‌ರೈಟ್ ಕಲ್ಲುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದು, ಕಲ್ಲು ಸಹಿತ ಟೆಂಪೋವನ್ನು ವಶಪಡಿಸಿಕೊಂಡಿದ್ದಾರೆ.

ನಾಗೇಶ್ ಆಚಾರ್ಯ ಎಂಬವರ ವಿರುದ್ಧ ಲ್ಯಾಟ್‌ರೈಟ್ ಕಲ್ಲು ಕಳ್ಳತನ ಹಾಗೂ ಅಕ್ರಮ ಸಾಗಾಟ ಪ್ರಕರಣ ದಾಖಲಾಗಿದೆ. ಶಿರ್ವ ಪೊಲೀಸ್ ಠಾಣೆಯ ತನಿಖಾ ಉಪನಿರೀಕ್ಷಕ ಲೋಹಿತ್ ಕುಮಾರ್ ಸಿ.ಎಸ್. ಅವರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ ಕಾಪು ತಾಲೂಕು ಬೆಳ್ಳೆ ಗ್ರಾಮದ ಕುಂತಳನಗರ ಮೋಕ್ಷಗಿರಿ ಬಳಿ ದಾಳಿ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆ ವೇಳೆ ಆರೋಪಿ ನಾಗೇಶ್ ಆಚಾರ್ಯ ಟೆಂಪೋದಲ್ಲಿ ಲ್ಯಾಟ್‌ರೈಟ್ ಕಲ್ಲುಗಳನ್ನು ಸರಕಾರಕ್ಕೆ ಮಾಹಿತಿ ನೀಡದೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.


