Saturday, June 28, 2025

spot_img

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ಗೃಹ ಸಚಿವರು ನೀಡಿದ್ರಾ ಸುಳಿವು

ಬೆಂಗಳೂರು

   ಬೆಂಗಳೂರಿನ ವಾಹನ ಮಾಲೀಕರು, ದ್ವಿಚಕ್ರ ವಾಹನ ಸವಾರರಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಶಾಕಿಂಗ್ ಸುದ್ದಿ ನೀಡಿದ್ದಾರೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗವು ನಗರದ ಇನ್ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಆಯೋಜಿಸಿದ್ದ “ನಗರ ಚಲನಶೀಲತೆ ಸವಾಲುಗಳು ಮತ್ತು ಪೊಲೀಸರ ಪಾತ್ರ” ವಿಷಯದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

   ಸಂಚಾರದಟ್ಟಣೆ ಹೆಚ್ಚು ಇರುವ ಕೆಲವು ರಸ್ತೆಗಳಲ್ಲಿ ಟೋಯಿಂಗ್ ವ್ಯವಸ್ಥೆ ಮರುಜಾರಿಗೆ ಚಿಂತನೆ ನಡೆಸಿದ್ದೇವೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ತಂತ್ರಜ್ಞಾನ ಬಳಕೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಸಮಸ್ಯೆ ಮುಂದುವರೆದಿದೆ. ಹೀಗಾಗಿ ಅಗತ್ಯ ಇದ್ದಲ್ಲಿ ಇನ್ನಷ್ಟು ಟ್ರಾಫಿಕ್ ಪೊಲೀಸ್ ಸ್ಟೇಷನ್​ಗಳನ್ನು ಆರಂಭಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ.

  ಕಾರ್ಯಕ್ರಮದಲ್ಲಿ ಅಸ್ತ್ರಂ ಮೊಬೈಲ್ ಆ್ಯಪ್ ಬಿಡುಗಡೆ, ಬೆಂಗಳೂರು ಟ್ರಾಫಿಕ್ ಪೊಲೀಸ್ ಇತಿಹಾಸ ಸಾರುವ ವಸ್ತು ಸಂಗ್ರಹಾಯ ಲೋಕಾರ್ಪಣೆಗೊಳಿಸಲಾಯಿತು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 

  ಡೆಲಿವರಿ ಬಾಯ್ ಒಬ್ಬ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಟೋಯಿಂಗ್ ಮಾಡಲಾಗಿದ್ದು, ಆತ ತನ್ನ ವಾಹನ ಬಿಡಿಸಿಕೊಳ್ಳಲು ಟೋಯಿಂಗ್‌ ವಾಹನದ ಹಿಂದೆ ಓಡುವ ವಿಡಿಯೋ 2022ರ ಆರಂಭದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆಗ ಟ್ರಾಫಿಕ್ ಪೊಲೀಸರು ಹಾಗೂ ಟೋಯಿಂಗ್‌ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಾಹನಗಳನ್ನು ಸುಖಾಸುಮ್ಮನೆ ಟೋಯಿಂಗ್‌ ವಾಹನದಲ್ಲಿ ಎತ್ತಿಕೊಂಡು ಹೋಗಿ ದಂಡ ವಿಧಿಸಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು. 

   ಈ ಎಲ್ಲ ಬೆಳವಣಿಗೆಗಳ ನಂತರ ಸರ್ಕಾರ ಟೋಯಿಂಗ್ ಸ್ಥಗಿತಗೊಳಿಸಿತ್ತು. ಅದರ ಬದಲಿಗೆ, ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ವಾಹನಕ್ಕೆ ವ್ಹೀಲ್ ಕ್ಲ್ಯಾಂಪ್ ಅಳವಡಿಸಿ ವಾಹನ ಮಾಲೀಕರು ಬಂದ ಬಳಿಕ ಸ್ಥಳದಲ್ಲೇ ದಂಡ ವಿಧಿಸುವ ವ್ಯವಸ್ಥೆ ಅನುಸರಿಸಲಾಗುತ್ತಿದೆ. 

   ಬೆಂಗಳೂರಿನ ಸಂಚಾರ ದಟ್ಟಣೆ ಹಾಗೂ ಸಂಚಾರಕ್ಕೆ ಸಂಬಂಧಿಸಿದ ಇತರ ರಿಯಲ್​ಟೈಂ ಅಪ್​​ಡೇಟ್ ಅನ್ನು ಸಾರ್ವಜನಿಕರಿಗೆ ಒದಗಿಸುವ ಉದ್ದೇಶದಿಂದ ಅಸ್ತ್ರಂ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಅಪಘಾತ, ಸಂಚಾರ ನಿಯಮ ಉಲ್ಲಂಘನೆ, ದಂಡ ಪಾವತಿ ಸೇರಿ ಹಲವು ಆಯ್ಕೆಗಳು ದೊರೆಯಲಿವೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ಇತಿಹಾಸ ಸಾರುವ ವಸ್ತು ಸಂಗ್ರಹಾಯದಲ್ಲಿ ನಗರದ ಸಂಚಾರ ನಿರ್ವಹಣೆಯ ಇತಿಹಾಸ ಮತ್ತು ವಿಕಾಸದ ಬಗ್ಗೆ ಬೆಳಕು ಚೆಲ್ಲಲಾಗಿದೆ.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles