Tuesday, July 1, 2025

spot_img

ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆ….!

ಬೆಂಗಳೂರು

    ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಬುಧವಾರ ತಡರಾತ್ರಿ ವರದಿಯಾಗಿದೆ. ಒಂದು ವೇಳೆ ಇದು ದೃಢಪಟ್ಟಲ್ಲಿ 2025ರಲ್ಲಿ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿರಲಿದೆ. ದುಬೈಗೆ ಪ್ರಯಾಣಿಸಿದ ಹಿನ್ನೆಲೆಯುಳ್ಳ 40 ವರ್ಷದ ವ್ಯಕ್ತಿ ಸೋಂಕಿತರಾಗಿದ್ದು, ಸದ್ಯ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಶಂಕಿತ ಪ್ರಕರಣದ ಬಗ್ಗೆ ದೃಢೀಕರಿಸಿಕೊಳ್ಳಲು ಹೆಚ್ಚಿನ ವೈದ್ಯಕೀರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

   ಕಳೆದ ವರ್ಷ ಕೆಲವು ಆಫ್ರಿಕನ್ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿದ್ದವು. ನಂತರ ಪಾಕಿಸ್ತಾನ ಮತ್ತು ಥಾಯ್ಲೆಂಡ್ ಸೇರಿದಂತೆ ಇತರ ದೇಶಗಳಲ್ಲಿ ಪ್ರಕರಣಗಳು ವರದಿಯಾಗಲು ಪ್ರಾರಂಭಿಸಿದಾಗ ಮಂಕಿಪಾಕ್ಸ್ ಬಗ್ಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆತಂಕ ಸೃಷ್ಟಿಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್​ ಅನ್ನು 2024 ರ ಆಗಸ್ಟ್​​ನಲ್ಲಿ ‘ಅಂತರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿತ್ತು.

    ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣವು 2024 ರ ಸೆಪ್ಟೆಂಬರ್​​​ನಲ್ಲಿ ವರದಿಯಾಗಿದೆ. ಕಳೆದ ತಿಂಗಳು, ಕೇರಳದಲ್ಲಿ ಎರಡು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದವು. 

   ಆರ್ಥೋಪಾಕ್ಸ್ ವೈರಸ್ ಕುಲದ ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ವೈರಲ್ ಸೋಂಕೇ ಮಂಕಿಪಾಕ್ಸ್. ಇದನ್ನು ಈಗ ಎಂಪಾಕ್ಸ್ ಎಂದು ಕರೆಯಲಾಗುತ್ತದೆ. ಸೋಂಕಿತ ರೋಗಿಯ ಲಾಲಾರಸ, ಬೆವರು ಮತ್ತು ಸೋಂಕಿತ ವಸ್ತುಗಳ ಮೂಲಕ ವೈರಸ್ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ.

   ಇಲ್ಲಿಯವರೆಗೆ ಈ ರೋಗಕ್ಕೆ ಯಾವುದೇ ಲಸಿಕೆ ಅಥವಾ ಶಿಫಾರಸು ಮಾಡಿದ ಔಷಧಿ ಇಲ್ಲ. ಊದಿಕೊಂಡ ದುಗ್ಧರಸ ಗ್ರಂಥಿಗಳು, ಜ್ವರ, ಚಳಿಯ ಅನುಭವ, ಸ್ನಾಯು ನೋವು, ತಲೆನೋವು, ಸುಸ್ತು ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ರೋಗಲಕ್ಷಣಗಳ ಆಧಾರದ ಮೇಲೆ ರೋಗಿಗೆ ಚಿಕಿತ್ಸೆ ನೀಡಲಾಗುತ್ತದೆ. 

   ಮಂಕಿಪಾಕ್ಸ್ ವೈರಸ್ ರೋಗಿಯ ಚರ್ಮ ಮತ್ತು ಉಸಿರಾಟ ನಾಳದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರೋಗಿಗಳಲ್ಲಿ ಈ ವೈರಸ್ ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ನರಮಂಡಲ ಮತ್ತು ಮೆದುಳಿನ ಜೀವಕೋಶಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ ಎಂದು ತಜ್ಞ ವೈದ್ಯರು ಈಗಾಗಲೇ ತಿಳಿಸಿದ್ದಾರೆ.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles