Sunday, March 16, 2025

spot_img

ಟಿಕೆಟ್‌ ದರ ಹೆಚ್ಚಳದ ಮುನ್ಸೂಚನೆ ನೀಡಿದ KSRTC ಮತ್ತು BMTC….!

ಬೆಂಗಳೂರು

   ಸಂಕ್ರಾಂತಿ ಹಬ್ಬದ ನಂತರ ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ಸಾರಿಗೆ ಮುಖಂಡರ ‌ಸಭೆ ನಡೆಯಲಿದೆ. ಈ ಸಭೆಯಲ್ಲಿ, ನಾಲ್ಕು ನಿಗಮಗಳ ಬಸ್​ಗಳ ಟಿಕೆಟ್ ದರ ಏರಿಕೆಗೆ ಅನುಮತಿ ನೀಡುವಂತೆ ಸಾರಿಗೆ ನೌಕರರು ಸಿಎಂ‌ ಸಿದ್ದರಾಮಯ್ಯಗೆ ಮನವಿ ಮಾಡಲು ಈಗಾಗಲೇ ‌ಅಂಕಿ ಅಂಶಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

   ಬಿಎಂಟಿಸಿ ಟಿಕೆಟ್ ದರ ಏರಿಕೆ ಮಾಡಿ 10 ವರ್ಷಗಳಾಗಿವೆ. ಕೆಎಸ್ಆರ್​ಟಿಸಿ ಟಿಕೆಟ್ ಏರಿಕೆ ಮಾಡಿ ಐದು ವರ್ಷಗಳಾಗಿವೆ. ಹಾಗಾಗಿ ನಿಗಮಗಳನ್ನು ನಡೆಸಲು ಕಷ್ಟ ಆಗುತ್ತಿದೆ. ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದೇವೆ ಎಂದು ಮನವಿ ಮಾಡಲು ಸಾರಿಗೆ ಮುಖಂಡರು ಸಿದ್ಧವಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

   ಇತ್ತ ಕಳೆದ ವಾರ ಸಿಎಂ ಜೊತೆಗೆ ಸಾರಿಗೆ ಅಧಿಕಾರಿಗಳ ಜತೆ ನಡೆದಿದ್ದ ಸಭೆಯಲ್ಲಿ, ಟಿಕೆಟ್ ದರ ಏರಿಕೆ ಮಾಡಿದರೆ ಮಾತ್ರ ಬಿಎಂಟಿಸಿ, ಕೆಎಸ್ಆರ್​ಟಿಸಿ ಉಳಿಸಲು ಸಾಧ್ಯ ಎಂದು ಸಿಎಂಗೆ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಪೆಟ್ರೋಲ್-ಡೀಸೆಲ್ ದರ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಇಂಧನ‌ ದರ ನಾಲ್ಕೈದು ವರ್ಷದಲ್ಲಿ ಏರಿಕೆಯಾಗುತ್ತಲೇ ಬಂದಿದೆ. ಅದಕ್ಕೆ ಅನುಗುಣವಾಗಿ ಟಿಕೆಟ್ ದರ ಏರಿಕೆಯಾಗಬೇಕೆಂದು ನಾಲ್ಕೂ ನಿಗಮಗಳು ಮನವಿ ಮಾಡಿವೆ. 

  ಟಿಕೆಟ್ ದರದಲ್ಲಿ ಶೇ 25 ರಿಂದ 28 ರಷ್ಟು ಏರಿಕೆಗೆ ನಾಲ್ಕು ನಿಗಮಗಳು ಈ ಹಿಂದೆಯೇ ಪ್ರಸ್ತಾವನೆಯನ್ನು ಸಲ್ಲಿಸಿವೆ. ಸಂಕ್ರಾಂತಿ ಸಭೆಯ ನಂತರ ಶೇ 25 ಅಲ್ಲದಿದ್ದರೂ, ಅದರ ಅರ್ಧದಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಮುಖಂಡ ಜಗದೀಶ್ ತಿಳಿಸಿದ್ದಾರೆ. 

   ಇತ್ತೀಚೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸಾರಿಗೆ ಇಲಾಖೆಗಳ ಸ್ಥಿತಿಗತಿ ಕುರಿತು ಸಭೆ ನಡೆದಿತ್ತು. ಈ ಸಭೆಯಲ್ಲಿ ಸಾರಿಗೆ ಇಲಾಖೆಗೆ 3650 ಕೋಟಿ ಹೊರೆಯಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಅಳಲು ತೋಡಿಕೊಂಡಿದ್ದರು. ನಷ್ಟ ಪರಿಹಾರಕ್ಕೆ ಶೇ 15ರಷ್ಟು ಪ್ರಯಾಣದರ ಹೆಚ್ಚಳಕ್ಕೆ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಶೇ 15 ರ ಪ್ರಮಾಣದಲ್ಲಿ ದರ ಪರಿಷ್ಕರಣೆಯಾದರೂ ನಿಗಮಗಳು ಇನ್ನೂ 1,800 ಕೋಟಿ ನಷ್ಟ ಅನುಭವಿಸುತ್ತವೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. 

   ಏತನ್ಮಧ್ಯೆ ದರ ಏರಿಕೆ ಪ್ರಸ್ತಾವಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಯಾಣಿಕರು, ಸಾರಿಗೆ ನಿಗಮಗಳು ತುಂಬಾ ‌ಸಂಕಷ್ಟದಲ್ಲಿರುವುದು ನಿಜ ಇರಬಹುದು. ಹಾಗೆಂದು ಏಕಾಏಕಿ ಸಿಕ್ಕಾಪಟ್ಟೆ ಟಿಕೆಟ್ ದರ ಏರಿಕೆ ಮಾಡಿದರೆ ನಮಗೂ ಕಷ್ಟ. ಶೇ 8 ರಿಂದ 10 ರಷ್ಟು ಮಾತ್ರ ಮಾಡಲಿ ಎಂದಿದ್ದಾರೆ.ಒಟ್ಟಿನಲ್ಲಿ, ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಾರಿಗೆ ನಿಗಮಗಳಿಗೆ ಟಿಕೆಟ್ ದರ ಏರಿಕೆ ಮಾಡಲು ಸಂಕ್ರಾಂತಿಯ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅನುಮತಿ ನೀಡುತ್ತಾರೆಯೇ ಎಂಬುದನ್ನು ‌ಕಾದು ನೋಡಬೇಕಿದೆ.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles