ಉಡುಪಿ: ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸರು ಅಮಾಯಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೆಲವು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಘಟನೆಯಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳು ಸಲ್ಲಿಸಿರುವ ದೂರಿನ ಪ್ರಕಾರ, ನ.8ರಂದು ತಮ್ಮ ವಸತಿ ಸಮುಚ್ಚಯದಲ್ಲಿ ದೀಪಾವಳಿ ಆಚರಿಸಿದ್ದು, ಯಾರಿಗೂ ತೊಂದರೆಯಾಗದಂತೆ ಪಟಾಕಿ ಸಿಡಿಸಿದ್ದಾರೆ. ಆದರೆ ನ.10ರಂದು ಮಣಿಪಾಲದ ಕೆಲವು ಪೊಲೀಸ್ ಸಿಬ್ಬಂದಿ ತಮ್ಮ ಕೊಠಡಿಗಳಿಗೆ ಬಂದು, ಸೂಕ್ತ ಕಾರಣಗಳನ್ನು ವಿವರಿಸದೆ ವಿದ್ಯಾರ್ಥಿಗಳನ್ನು ಹೊರಗೆ ಕರೆತಂದಿದ್ದಾರೆ. ಈ ವೇಳೆ ವಸತಿ ಸಮುಚ್ಚಯದಲ್ಲಿದ್ದ ಇತರರ ಎದುರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಳಿಕ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಬೆಳಿಗ್ಗೆ 11ರಿಂದ ರಾತ್ರಿ 8 ಗಂಟೆಯವರೆಗೆ ಇರಿಸಲಾಗಿತ್ತು. ನಂತರ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಕೆಲವು ಹೇಳಿಕೆಗಳು ಮತ್ತು ವಿವರಗಳ ನಿಖರತೆಯ ಬಗ್ಗೆಯೂ ಅನುಮಾನವಿದೆ ಎಂದು ವಿದ್ಯಾರ್ಥಿಗಳು ದೂರಿನಲ್ಲಿ ತಿಳಿಸಿದ್ದಾರೆ.

ದೀಪಾವಳಿ ರಾತ್ರಿ ಮಣಿಪಾಲದ ವಿವಿಧೆಡೆ ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸಿ, ಪೊಲೀಸರ ಮೇಲೆಯೂ ಪಟಾಕಿ ಎಸೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಮಣಿಪಾಲ ಪೊಲೀಸರು ಸುಮಾರು 20 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

ಆದರೆ, ಸಾರ್ವಜನಿಕ ಸ್ಥಳದಲ್ಲಿ ನಡೆದ ಕೃತ್ಯಕ್ಕೂ ತಮ್ಮ ಫ್ಲ್ಯಾಟ್ ಆವರಣದಲ್ಲಿ ಶಾಂತಿಯುತವಾಗಿ ಹಬ್ಬ ಆಚರಿಸಿದ ತಮಗೂ ಸಂಬಂಧವಿಲ್ಲ. ಬೇರೆಯವರು ಮಾಡಿದ ಕೃತ್ಯಕ್ಕೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂಬುದು ವಿದ್ಯಾರ್ಥಿಗಳ ಆರೋಪ. ಇಂಜಿನಿಯರಿಂಗ್ ಪರೀಕ್ಷೆಯ ತಯಾರಿಯ ಸಂದರ್ಭದಲ್ಲೇ ಪ್ರಕರಣ ದಾಖಲಾಗಿರುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ.


