ಉಡುಪಿ : ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಪ್ರದೇಶದ ಸರಕಾರಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಬೃಹತ್ ಪ್ರಮಾಣದಲ್ಲಿ ಕೆಂಪುಕಲ್ಲು ಅಗೆದು ಅಕ್ರಮವಾಗಿ ಸಾಗಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಧಾಳಿ, ಅಧಿಕಾರಿಗಳ ಪರಿಶೀಲನೆ ನಡೆದ ಕೆಲವೇ ವಾರಗಳಲ್ಲಿ ಮತ್ತೆ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ತಲೆ ಎತ್ತಿದೆ. ಸುಮಾರು 294 ಮೆಟ್ರಿಕ್ ಟನ್ ಕೆಂಪುಕಲ್ಲುಗಳನ್ನು ಅಕ್ರಮವಾಗಿ ತೆಗೆದು ಕಳವು ಮಾಡಲಾಗಿದ್ದು, ಸರಕಾರಕ್ಕೆ ಅಂದಾಜು 4.65 ಲಕ್ಷ ನಷ್ಟ ಉಂಟಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.

ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ರಬ್ಬರ್ ತೋಟದ ಹಿಂಭಾಗದಲ್ಲಿರುವ ಸರ್ವೆ ನಂಬರ್ 56ರ ಸರಕಾರಿ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಡುಪಿ ಜಿಲ್ಲಾ ಭೂ ವಿಜ್ಞಾನಿ ಕುಮಾರ ಬಿ. ಅವರು ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಮಧ್ಯಾಹ್ನ ಸುಮಾರು 2.15ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಸರಕಾರಿ ಜಾಗದಲ್ಲಿ ನೆಲವನ್ನು ಸಮತಟ್ಟು ಮಾಡಿ, ಸುಮಾರು 14 ಮೀಟರ್ ಉದ್ದ, 8 ಮೀಟರ್ ಅಗಲ ಹಾಗೂ ಒಂದು ಮೀಟರ್ ಆಳದ ಪ್ರದೇಶದಲ್ಲಿ ಕೆಂಪುಕಲ್ಲುಗಳನ್ನು ಅಗೆದು ತೆಗೆಯಲಾಗಿರುವುದು ಪತ್ತೆಯಾಗಿದೆ. ಅಂದಾಜು 294 ಮೆಟ್ರಿಕ್ ಟನ್ ಕಲ್ಲುಗಳನ್ನು ಗಣಿಗಾರಿಕೆ ಮಾಡಿ ಸಾಗಾಟ ಮಾಡಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ಒಂದು ಟಿಲ್ಲರ್ ಯಂತ್ರ, ಎರಡು ಕಲ್ಲು ಎಬ್ಬಿಸುವ ಟ್ರಾಲಿಗಳು ಹಾಗೂ ಕಲ್ಲು ಸಾಗಾಟಕ್ಕೆ ಬಳಸಲು ನಿಲ್ಲಿಸಲಾಗಿದ್ದ KA-15-A-1006 ಸಂಖ್ಯೆಯ ಟಿಪ್ಪರ್ ಲಾರಿಯನ್ನು ಅಧಿಕಾರಿಗಳು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ನಡೆದರೂ ಮತ್ತೆ ಆರಂಭವಾದ ಗಣಿಗಾರಿಕೆ!

ಬ್ಯಾಟಿಯಾಣಿ ಪ್ರದೇಶದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಇದೇ ಮೊದಲಲ್ಲ ಹಲವಾರು ವರ್ಷಗಳಿಂದ ಇಲ್ಲಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮಾಹಿತಿ ಇದ್ದರು ಕೂಡ ಇದುವರೆಗೂ ಇದನ್ನು ಸಂಪೂರ್ಣ ಬಂದ್ ಮಾಡಲು ಕಾರ್ಯ ನಡೆಯದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರ ದೂರಿನ ಮೇರೆಗೆ ಕೆಲವೇ ವಾರಗಳ ಹಿಂದೆಯಷ್ಟೇ ಪೊಲೀಸರು ಅಕ್ರಮ ಗಣಿಗಾರಿಕೆ ಅಡ್ಡೆಯ ಮೇಲೆ ದಾಳಿ ನಡೆಸಿ ಕ್ರಮ ಕೈಗೊಂಡಿದ್ದರು. ಆದರೆ ಈ ಕಾರ್ಯಾಚರಣೆಯ ಬೆನ್ನಲ್ಲೇ ಮತ್ತೆ ಗಣಿಗಾರಿಕೆ ಆರಂಭವಾಗಿರುವುದು ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಈ ಪ್ರದೇಶವು ಪರಿಸರ ಸೂಕ್ಷ್ಮ ವಲಯದ (ಇಕೋ ಸೆನ್ಸಿಟಿವ್ ಜೋನ್) ವ್ಯಾಪ್ತಿಗೆ ಒಳಪಡುತ್ತದೆ ಎನ್ನಲಾಗಿದ್ದು, ಇಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ. ಆದರೂ ಸರಕಾರಿ ಜಾಗದಲ್ಲೇ ನಿರಂತರವಾಗಿ ಕಲ್ಲು ಅಗೆದು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದಲ್ಲದೆ, ಈ ಪ್ರದೇಶದಲ್ಲಿ ಅಪಾಯಕಾರಿಯಾದ ಗುಂಡಿಗಳು ನಿರ್ಮಾಣವಾಗಿದ್ದು, ಅಕ್ರಮ ಗಣಿಗಾರಿಕೆಯಿಂದ ಭೂಮಿಯ ಸ್ವರೂಪವೇ ಬದಲಾಗುತ್ತಿದೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗುವುದು ಸೇರಿದಂತೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಒಮ್ಮೆ ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡರೂ ಅಕ್ರಮ ಗಣಿಗಾರಿಕೆ ಮತ್ತೆ ಹೇಗೆ ಆರಂಭವಾಗುತ್ತಿದೆ? ಸರಕಾರಿ ಜಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಚಟುವಟಿಕೆಗೆ ಕಡಿವಾಣ ಹಾಕುವವರು ಯಾರು? ಪರಿಸರ ಸೂಕ್ಷ್ಮ ವಲಯದ ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಯಾವಾಗ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


