Thursday, November 12, 2026

spot_img

ಮಕ್ಕಳ ದಿನಾಚರಣೆ: 56 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ

ಉಡುಪಿ: ಮಕ್ಕಳ ಸರ್ವತೋಮುಖ ಬೆಳವಣಿಗೆ, ಆರೋಗ್ಯ ಜಾಗೃತಿ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯ ಪರಿಚಯಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೌಮಾರಭೃತ್ಯ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷ ಮಾಹಿತಿ ಕಾರ್ಯಕ್ರಮವನ್ನು ನ.12ರಂದು ಆಯೋಜಿಸಲಾಯಿತು. ಉದ್ಯಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಕಾಲೇಜಿಗೆ ಆಹ್ವಾನಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್ ಸ್ವಾಗತಿಸಿ ಮಾತನಾಡಿ, ಮಕ್ಕಳ ಆರೋಗ್ಯ ರಕ್ಷಣೆಗೆ ಆಯುರ್ವೇದದಲ್ಲಿ ಲಭ್ಯವಿರುವ ಚಿಕಿತ್ಸಾ ವಿಧಾನಗಳು, ಔಷಧಗಳು ಹಾಗೂ ಆಸ್ಪತ್ರೆಯ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳು ತಜ್ಞ ವೈದ್ಯರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಹಾಗೂ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ. ಶ್ರೀಕಾಂತ್ ಪಿ. ಮಾತನಾಡಿ, ಆಯುರ್ವೇದವು ಜೀವನಶೈಲಿಯನ್ನು ಪ್ರತಿಬಿಂಬಿಸುವ ವಿಜ್ಞಾನವಾಗಿದೆ. ಸಸ್ಯಗಳ ಜ್ಞಾನವೇ ಆಯುರ್ವೇದದ ಮೂಲವಾಗಿದ್ದು, ಔಷಧೀಯ ಸಸ್ಯಗಳ ಮಹತ್ವ ಹಾಗೂ ಅವುಗಳ ಉಪಯುಕ್ತತೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.ಸಂಸ್ಥೆಯ ಶೈಕ್ಷಣಿಕ ಉಪಪ್ರಾಂಶುಪಾಲ ಡಾ. ನಾಗರಾಜ್ ಎಸ್. ಮಾತನಾಡಿ, ಮಕ್ಕಳ ಭವಿಷ್ಯದ ಬೆಳವಣಿಗೆಯಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಜ್ಞಾನದೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.

ಉದ್ಯಾವರ ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ತಾರಾ ಮಾತನಾಡಿ, ಆಯುರ್ವೇದ ವೈದ್ಯಕೀಯ ಕ್ಷೇತ್ರದ ನುರಿತ ತಜ್ಞರೊಂದಿಗೆ ವಿದ್ಯಾರ್ಥಿಗಳಿಗೆ ಸಂವಾದ ನಡೆಸಲು ಹಾಗೂ ಕಾಲೇಜಿನ ನೈಸರ್ಗಿಕ ಪರಿಸರದಲ್ಲಿ ಹೊಸ ಜ್ಞಾನವನ್ನು ಪಡೆಯಲು ಅವಕಾಶ ಕಲ್ಪಿಸಿರುವುದು ಸಂತಸದ ಸಂಗತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಮಾತನಾಡಿ, ಆಯುರ್ವೇದ ಕಲಿಕೆಯ ಮಹತ್ವ, ಮುಂಜಾನೆಯಿಂದ ರಾತ್ರಿಯವರೆಗೆ ಅನುಸರಿಸಬೇಕಾದ ದಿನಚರ್ಯೆ ಹಾಗೂ ಪ್ರಕೃತಿಗೆ ಅನುಗುಣವಾಗಿ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು. ನಮ್ಮ ದೈನಂದಿನ ಜೀವನಕ್ರಮವು ಆರೋಗ್ಯ ಮತ್ತು ಆಯುಷ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯಕರ ಅಭ್ಯಾಸಗಳನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು ಎಂದರು.

ಬಳಿಕ ಡಾ. ಪೃಥ್ವಿರಾಜ್ ಪುರಾಣಿಕ್ ಹಾಗೂ ಡಾ. ಸಹನಾ ಶಂಕರಿ ಅವರು ಹದಿಹರೆಯದಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕೌಮಾರಭೃತ್ಯ ವಿಭಾಗದ ಮಕ್ಕಳ ತಜ್ಞರು 56 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು. ದ್ರವ್ಯಗುಣ ವಿಭಾಗದ ಅಧ್ಯಾಪಕರಾದ ಡಾ. ಫೈಜಲ್ ಹಾಗೂ ಡಾ. ಪೂರ್ಣಿಮಾ ಅವರ ನೇತೃತ್ವದಲ್ಲಿ ಕಾಲೇಜಿನ ಅಮೂಲ್ಯ ಔಷಧೀಯ ಸಸ್ಯಗಳು ಮತ್ತು ಅವುಗಳ ಉಪಯೋಗಗಳ ಕುರಿತು ಮಾಹಿತಿ ನೀಡಲಾಯಿತು. ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಎನ್. ಹಾಗೂ ಸಹಪ್ರಾಧ್ಯಾಪಕಿ ಡಾ. ಅಂಜು ಥೋಮಸ್ ಅವರು ಅತ್ಯಾಧುನಿಕ ಅನಾಟಮೇಜ್ ತಂತ್ರಜ್ಞಾನದ ಮೂಲಕ ಮಾನವ ದೇಹದ ವಿವಿಧ ಅಂಗಾಂಗಗಳ ರಚನೆ ಮತ್ತು ಕಾರ್ಯವಿಧಾನವನ್ನು ವಿವರಿಸಿದರು. ಬಳಿಕ ಅನಾಟಮಿ ಸಂಗ್ರಹಾಲಯದಲ್ಲಿ ಅಂಗಾಂಗಗಳ ರಚನೆಯನ್ನು ಪ್ರತ್ಯಕ್ಷವಾಗಿ ಪರಿಚಯಿಸಿದರು. ಬಾಲರೋಗ ವಿಭಾಗದ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪೂಜಾ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ವೈದ್ಯರಾದ ಡಾ. ಗಂಗಾ ಹಾಗೂ ಡಾ. ನಾಗಶ್ರೀ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಕೌಮಾರಭೃತ್ಯ ವಿಭಾಗದ ಸಹಪ್ರಾಧ್ಯಾಪಕಿ ಡಾ. ಸಹನಾ ಶಂಕರಿ ವಂದಿಸಿದರು. ವಿಭಾಗದ ಸಹಪ್ರಾಧ್ಯಾಪಕಿ ಡಾ. ನಾಗರತ್ನ ಜೆ., ಸಹಾಯಕ ಪ್ರಾಧ್ಯಾಪಕಿಯರಾದ ಡಾ. ಕಾವ್ಯ ಹಾಗೂ ಡಾ. ಚಿತ್ರಲೇಖಾ ಉಪಸ್ಥಿತರಿದ್ದರು. ಮಕ್ಕಳ ಆರೋಗ್ಯ, ಆಯುರ್ವೇದ, ಔಷಧೀಯ ಸಸ್ಯಗಳು ಹಾಗೂ ಮಾನವ ದೇಹದ ರಚನೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡಿದ ಈ ಕಾರ್ಯಕ್ರಮ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles