ಉಡುಪಿ: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಶಿಕ್ಷಣ ಪಡೆಯುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿನಿಗೆ ಸಂಸ್ಥೆಯ ವತಿಯಿಂದ ನಿರ್ಮಿಸಿಕೊಡಲಾದ 109ನೇ ಮನೆ ನವೀನ್ ನಿಲಯ ಬ್ರಹ್ಮಾವರ ತಾಲೂಕಿನ ಸಾಸ್ತಾನದ ಗುಂಡ್ಮಿಯಲ್ಲಿ ನ.11ರಂದು ಹಸ್ತಾಂತರಿಸಲಾಯಿತು.

ವಿದ್ಯಾಪೋಷಕ್ ಯೋಜನೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾನ್ವಿ (ಯಶೋಧ ಮತ್ತು ದಿ. ರವಿ ಪೂಜಾರಿ ದಂಪತಿಯ ಪುತ್ರಿ) ಹಾಗೂ ಅವರ ಕುಟುಂಬಕ್ಕೆ ಅಮೆರಿಕದ ಡಾ. ದಿನೇಶ್ ರಾವ್ ಪೇಜಾವರ ಮತ್ತು ವೃಂದಾ ರಾವ್ ಪೇಜಾವರ ದಂಪತಿಗಳು ತಮ್ಮ ಪುತ್ರ ನವೀನ್ ಪೇಜಾವರ ಅವರ ಸ್ಮರಣಾರ್ಥ ನಿರ್ಮಿಸಿಕೊಟ್ಟ ನೂತನ ಮನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ದಿನೇಶ್ ರಾವ್ ಪೇಜಾವರ ದಂಪತಿಗಳು, ದಾನ ಮಾಡುವುದು ಸುಲಭ. ಆದರೆ ದಾನವನ್ನು ಯೋಜನಾಬದ್ಧವಾಗಿ ಸತ್ಪಾತ್ರರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು ಕಷ್ಟದ ಕೆಲಸ. ಈ ಮಹತ್ವದ ಕಾರ್ಯವನ್ನು ಯಕ್ಷಗಾನ ಕಲಾರಂಗ ಅತ್ಯಂತ ಸಮರ್ಪಕವಾಗಿ ನಿರ್ವಹಿಸುತ್ತಿದೆ. ಸಂಸ್ಥೆಯ ಎಲ್ಲಾ ಕಾರ್ಯಗಳು ನಮಗೆ ಅಪಾರ ತೃಪ್ತಿ ನೀಡಿವೆ. ಸಾನ್ವಿ, ಅವರ ತಾಯಿ ಹಾಗೂ ಸಹೋದರ ಈ ಮನೆಯಲ್ಲಿ ಸುಖ, ಶಾಂತಿಯಿಂದ ಬಾಳಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಾವುದೇ ಶಿಫಾರಸು ಅಥವಾ ಪ್ರಭಾವಕ್ಕೆ ಒಳಗಾಗದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಅಗತ್ಯಗಳಿಗೆ ಸ್ಪಂದಿಸುವ ಯಕ್ಷಗಾನ ಕಲಾರಂಗ ಸಮಾಜಮುಖಿ ಕಾರ್ಯದಲ್ಲಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಪಣಂಬೂರು ವಾಸುದೇವ ಐತಾಳ್ ಮಾತನಾಡಿ, ಅಮೆರಿಕದಲ್ಲಿ ಡಾ. ದಿನೇಶ್ ರಾವ್ ಪೇಜಾವರ ಅವರು ನಡೆಸುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ವಿವರಿಸಿದರು. ಅಮೆರಿಕದಿಂದ ಆಗಮಿಸಿದ್ದ ಪೇಜಾವರ ಕುಟುಂಬದ ಬಂಧುಗಳಿಗೆ ಯಕ್ಷಗಾನ ಕಲಾರಂಗದ ಸೇವಾ ಚಟುವಟಿಕೆಗಳ ಪರಿಚಯ ಮಾಡಿಕೊಟ್ಟರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ, ವಿದ್ಯಾಪೋಷಕ್ ಯೋಜನೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಉತ್ತಮ ಆಸರೆಯಾಗಿದೆ. ತಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಮಾಲತಿ ಕರ್ನಲ್ ರಾಮಚಂದ್ರ ರಾವ್, ಸಂಜಯ್ ರಾವ್, ಹೇಮಾ ರಾವ್, ಶ್ಯಾಮಲಾ ಪ್ರಸಾದ್, ಡಾ. ಅಶೋಕ್ ವಾಸನ್, ನಿರ್ಮಲಾ ವಾಸನ್, ಪೃಥ್ವಿರಾಜ್, ವಿಮಲಾ ರಮೇಶ್, ಮೀರಾ ಭಟ್, ಸಹನಾ ಭಾರದ್ವಾಜ್ ಉಪಸ್ಥಿತರಿದ್ದರು. ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ್ ಶೆಣೈ, ಭುವನಪ್ರಸಾದ್ ಹೆಗ್ಡೆ, ಯು. ಅನಂತರಾಜ್ ಉಪಾಧ್ಯ, ಮರ್ಣೆ ಉಮೇಶ್ ಭಟ್, ಆರ್. ವಸಂತ, ಅಜಿತ್ ಅಂಬಲಪಾಡಿ, ಡಾ. ಪ್ರತಿಮಾ ಜೆ. ಆಚಾರ್ಯ, ನರಸಿಂಹ ಮೂರ್ತಿ ಹಾಗೂ ಜಯರಾಮ್ ಪಡಿಯಾರ್ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.


