Thursday, November 12, 2026

spot_img

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ: ಹೆಜಮಾಡಿ ಟೋಲ್ ಬಳಿ ನಾಲ್ವರ ಬಂಧನ

ಉಡುಪಿ : ಗೋವಾ ರಾಜ್ಯದಿಂದ ಯಾವುದೇ ಪರವಾನಿಗೆ ಇಲ್ಲದೆ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಜಾಲವನ್ನು ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಬಳಿ ಪತ್ತೆಹಚ್ಚಿದ್ದಾರೆ. ಮದ್ಯ ಸಾಗಿಸುತ್ತಿದ್ದ ವಾಹನ ಹಾಗೂ ಅದಕ್ಕೆ ಎಸ್ಕಾರ್ಟ್ ನೀಡುತ್ತಿದ್ದ ಕಾರನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಒಟ್ಟು 22.35 ಲಕ್ಷ ಮೌಲ್ಯದ ಮದ್ಯ ಮತ್ತು ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರಿಗೆ ದೊರೆತ ಖಚಿತ ಮಾಹಿತಿಯಂತೆ ನ. 11ರಂದು ಹೆಜಮಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಟೋಲ್ ಗೇಟ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಈ ವೇಳೆ ಗೋವಾದಿಂದ ಮಂಗಳೂರಿನತ್ತ ಮದ್ಯ ಸಾಗಿಸುತ್ತಿದ್ದ ಮಹೀಂದ್ರಾ ಪಿಕ್‌ಅಪ್ ಇನ್ಸುಲೇಟರ್ ವಾಹನ ಹಾಗೂ ಅದಕ್ಕೆ ಎಸ್ಕಾರ್ಟ್ ನೀಡುತ್ತಿದ್ದ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ಪರಿಶೀಲಿಸಲಾಯಿತು. ವಾಹನಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದ ಮದ್ಯ ಪತ್ತೆಯಾಗಿದೆ.

ಬಂಧಿತರನ್ನು ಕಾರವಾರದ ಕಿನ್ನಾರ ಗ್ರಾಮದ ವಿನಯ್ (47), ನಂದಗಡದ ಗಜಾನನ ಮಹಾಬಲೇಶ್ವರ ನಾಯ್ಕ್ (45), ಅಮದಹಳ್ಳಿಯ ಸುಜಿತ್ ತಾಳೆಕೆರೆ (25) ಹಾಗೂ ಶಿರ್ವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಎಂದು ಗುರುತಿಸಲಾಗಿದೆ. ಬಂಧಿತ ವಿನಯ್ ವಿರುದ್ಧ ಈಗಾಗಲೇ ಚಿತ್ತಾಕುಲ ಪೊಲೀಸ್ ಠಾಣೆ, ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಅಬಕಾರಿ ಪೊಲೀಸ್ ಠಾಣೆಗಳಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು 2,583 ಲೀಟರ್ ಮದ್ಯದ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ 14.35 ಲಕ್ಷವಾಗಿದೆ. ಮದ್ಯ ಸಾಗಾಟಕ್ಕೆ ಬಳಸಿದ ಮಹೀಂದ್ರಾ ಪಿಕ್‌ಅಪ್ ಇನ್ಸುಲೇಟರ್ ವಾಹನದ ಮೌಲ್ಯ 5 ಲಕ್ಷ ಹಾಗೂ ಎಸ್ಕಾರ್ಟ್‌ಗೆ ಬಳಸಿದ ಮಾರುತಿ ಸ್ವಿಫ್ಟ್ ಕಾರಿನ ಮೌಲ್ಯ 3 ಲಕ್ಷ, ಒಟ್ಟು ಜಪ್ತಿ ಸೊತ್ತಿನ ಮೌಲ್ಯ 22.35 ಲಕ್ಷ ಎಂದು ಅಂದಾಜಿಸಲಾಗಿದೆ.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಡುಬಿದ್ರಿ ಠಾಣೆಯ ಪಿಎಸ್‌ಐಗಳಾದ ಶಕ್ತಿವೇಲು ಈ. ಮತ್ತು ಅನಿಲ್ ಕುಮಾರ್ ಟಿ. ನಾಯ್ಕ್, ಅಪರಾಧ ಪತ್ತೆ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles