Saturday, October 31, 2026

spot_img

ಪ್ರಜಾಸೇವಾ ಆಂದೋಲನ ಸಭೆಯಲ್ಲಿ 47 ಅಹವಾಲು ಸ್ವೀಕಾರ

ಉಡುಪಿ : ಆಡಳಿತ ವ್ಯವಸ್ಥೆಯನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ವಿಶೇಷ ಗಮನಹರಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಮಣಿಪುರ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪ್ರಜಾಸೇವಾ ಇಲಾಖೆ ಹಾಗೂ ಉಡುಪಿ ತಾಲೂಕು ಆಡಳಿತದ ವತಿಯಿಂದ ಶನಿವಾರ ನಡೆದ ಉಡುಪಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸೇವೆ ಮಾಡುವ ಮೂಲಕ ಸಮಾಜದ ಋಣ ತೀರಿಸಲು ಭಗವಂತ ನಮಗೆ ಅವಕಾಶ ಕಲ್ಪಿಸಿದ್ದಾನೆ. ಸಮಾಜದಲ್ಲಿ ಅನೇಕ ನೊಂದವರು, ಅಸಹಾಯಕರು ಹಾಗೂ ಸಂಕಷ್ಟದಲ್ಲಿರುವ ಜನರಿರುತ್ತಾರೆ. ಅವರ ಸಮಸ್ಯೆಗಳನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು. ಪ್ರಜೆಗಳ ಸೇವೆಯೇ ಪರಮಾತ್ಮನ ಸೇವೆ ಎಂಬ ಭಾವನೆಯೊಂದಿಗೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು. ಈವರೆಗೆ ನಡೆದ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಸ್ಥಗಿತಗೊಂಡಿರುವ ಕುರಿತು ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದಿವೆ. ಸಾಮಾಜಿಕ ಪಿಂಚಣಿ ಯೋಜನೆಗಳಿಗೆ ಸಂಬಂಧಿಸಿದಂತೆ ಅನರ್ಹ ಫಲಾನುಭವಿಗಳನ್ನು ಕೈಬಿಡುವ ಉದ್ದೇಶದಿಂದ ಅರ್ಹರ ದಾಖಲೆಗಳ ಮರುಪರಿಶೀಲನೆ ಹಾಗೂ ಸಮೀಕ್ಷೆ ನಡೆಯುತ್ತಿದೆ. ಮುಂದಿನ 15 ದಿನಗಳೊಳಗೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುವ ನಿರೀಕ್ಷೆಯಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ರಸ್ತೆ, ದಾರಿದೀಪ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಹಾಗೂ ಮೆಸ್ಕಾಂ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಅಕ್ರಮ-ಸಕ್ರಮ, ನಿವೇಶನ, ಹಕ್ಕುಪತ್ರ ಮತ್ತಿತರ ಅಹವಾಲುಗಳಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಆಡಳಿತ ವ್ಯವಸ್ಥೆ ಹಾಗೂ ವಿವಿಧ ಇಲಾಖೆಗಳ ಮೂಲಕ ದೊರೆಯುವ ಸೌಲಭ್ಯಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಿ, ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಅವರ ಮನೆಬಾಗಿಲಿಗೇ ತಲುಪಿಸುವುದು ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು ಪ್ರಜಾಸೇವಾ ಆಂದೋಲನದ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲೆಯಲ್ಲಿ ಸೆಪ್ಟೆಂಬರ್ 9ರಿಂದ ಪ್ರಜಾಸೇವಾ ಆಂದೋಲನ ಸಭೆಗಳು ನಡೆಯುತ್ತಿದ್ದು, ಈವರೆಗೆ ಸಾರ್ವಜನಿಕರಿಂದ ಸುಮಾರು 2,400ಕ್ಕೂ ಹೆಚ್ಚು ಅಹವಾಲುಗಳು ಸ್ವೀಕೃತವಾಗಿವೆ. ಅವುಗಳಲ್ಲಿ ಶೇ.80ರಷ್ಟು ಅಹವಾಲುಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಸಭೆಗಳಲ್ಲಿ ವಿವಿಧ ಇಲಾಖೆಗಳ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯುವ ಮೂಲಕ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ, ಅರ್ಹರನ್ನು ಫಲಾನುಭವಿಗಳನ್ನಾಗಿಸುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸ್ವೀಕರಿಸಲಾಗುವ ಎಲ್ಲಾ ಅರ್ಜಿಗಳನ್ನು ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ತಮ್ಮ ಅರ್ಜಿಗಳ ಸ್ಥಿತಿಗತಿ ಹಾಗೂ ಪರಿಹಾರದ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳಿಗೆ ವೈಯಕ್ತಿಕ ಗಮನ ನೀಡಿ ಗುಣಾತ್ಮಕ ಪರಿಹಾರ ಒದಗಿಸಬೇಕು. ಒಂದೇ ಸಮಸ್ಯೆಯನ್ನು ಹೊತ್ತುಕೊಂಡು ಜನರು ಮತ್ತೆ ಮತ್ತೆ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸರ್ಕಾರಿ ಸೇವೆಯೇ ದೇವರ ಸೇವೆ, ಸಾರ್ವಜನಿಕರೇ ದೇವರು ಎಂಬ ಮನೋಭಾವದಿಂದ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಭೆ ನಡೆಯುವ ಮೊದಲೇ ಸಮೀಪದ ಗ್ರಾಮ ಪಂಚಾಯತ್‌ಗೆ ಸಲ್ಲಿಸಬಹುದು. ಗ್ರಾಮ ಪಂಚಾಯತ್ ಸಿಬ್ಬಂದಿ ಅವುಗಳನ್ನು ಗ್ರಾಮ ಒನ್ ಕೇಂದ್ರದ ಮೂಲಕ ಸ್ಕ್ಯಾನ್ ಮಾಡಿ ಟೋಕನ್ ನೀಡಲಿದ್ದು, ಇದರಿಂದ ಸಭೆಯ ದಿನದಂದು ಅರ್ಜಿ ಸಲ್ಲಿಸಲು ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ತಪ್ಪಲಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಯಿತು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 47 ಅಹವಾಲುಗಳನ್ನು ಸಭೆಯಲ್ಲಿ ಸ್ವೀಕರಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಸಹಾಯಕ ಆಯುಕ್ತ ಮಹೇಶ್ ಪಿ.ಎಸ್., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೊಳ್ಳಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ವಿಭುದೆ, ಉಡುಪಿ ತಹಶೀಲ್ದಾರ್ ಗುರುರಾಜ್, ಕಾರ್ಯನಿರ್ವಾಹಕ ಅಧಿಕಾರಿ ವಿಜಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles