Wednesday, October 21, 2026

spot_img

ವ್ಯಕ್ತಿಯ ನಿಗೂಢ ಸಾವು; ಪತ್ನಿಯ ಮನೆಯವರೊಂದಿಗೆ ಗಲಾಟೆ ಹಿನ್ನೆಲೆ ಸಂಶಯ

ಉಡುಪಿ : ಪತ್ನಿಯ ಮನೆಯವರೊಂದಿಗೆ ಪದೇಪದೇ ಗಲಾಟೆ ನಡೆಯುತ್ತಿದ್ದುದಾಗಿ ಹೇಳಿಕೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸಹೋದರಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಮೊಹಮ್ಮದ್ ಇಕ್ಬಾಲ್ ಎಂದು ಗುರುತಿಸಲಾಗಿದೆ. ಅವರ ಸಹೋದರಿ, ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಬಲ್ಕೀಸ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮೊಹಮ್ಮದ್ ಇಕ್ಬಾಲ್ ಕಳೆದ ಒಂದು ವರ್ಷದಿಂದ ಪತ್ನಿಯ ತವರು ಮನೆಯಾದ ಪಾರಂಪಳ್ಳಿ ಗ್ರಾಮದ ಮಸೀದಿ ಬಳಿಯ ಬೀಚ್ ಸಮೀಪದ ಮನೆಯಲ್ಲಿ ವಾಸವಾಗಿದ್ದರು. ಅ.19ರಂದು ಬೆಳಗಿನ ಜಾವ 3.40ರ ಸುಮಾರಿಗೆ ಅವರನ್ನು ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಾಧಿಕಾರಿಗಳು ವಿಚಾರಣೆ ವೇಳೆ ಇಕ್ಬಾಲ್ ಅವರು ಬೆಳಗಿನ ಜಾವ 3.50ರ ಸುಮಾರಿಗೆ ಮೃತಪಟ್ಟಿರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಕ್ಬಾಲ್ ಮನೆಗೆ ಬಂದಾಗಲೆಲ್ಲ ಪತ್ನಿ ಸಫ್ರಾಭಿ ತಮ್ಮೊಂದಿಗೆ ಪದೇಪದೇ ಗಲಾಟೆ ಮಾಡುತ್ತಿರುವುದಾಗಿ ನೋವು ತೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅ.14ರಂದು ರಾತ್ರಿ ಅಬ್ದುಲ್ ರಜಾಕ್ ಅವರು ಮನೆಗೆ ಬಂದು, ಇಕ್ಬಾಲ್ ಮತ್ತು ಅವರ ಪತ್ನಿಯ ಮನೆಯವರ ನಡುವೆ ಗಲಾಟೆ ನಡೆದಿರುವುದಾಗಿ ತಿಳಿಸಿದ್ದರು. ಸುಮಾರು ಅರ್ಧ ಗಂಟೆಯ ಬಳಿಕ ಇಕ್ಬಾಲ್ ಮನೆಗೆ ಬಂದಾಗ ಅವರ ಬನಿಯನ್ ಹರಿದಿರುವುದು ಕಂಡುಬಂದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪೊಲೀಸ್ ದೂರು ನೀಡುವುದಾಗಿ ಇಕ್ಬಾಲ್ ಹೇಳಿದ್ದರೂ, ಸಹೋದರಿ ಹಾಗೂ ಮನೆಯವರು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದರು ಎನ್ನಲಾಗಿದೆ. ಇಕ್ಬಾಲ್ ಅವರ ಪತ್ನಿ ಹಾಗೂ ಪತ್ನಿಯ ಮನೆಯವರು ಮತ್ತೆ ಗಲಾಟೆ ಮಾಡಿರುವ ಸಾಧ್ಯತೆಯಿದ್ದು, ಅವರ ಸಾವಿನ ಬಗ್ಗೆ ಸಂಶಯವಿದೆ ಎಂದು ಬಲ್ಕೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles