ಉಡುಪಿ : ಕಾರ್ಕಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 7ರಂದು ಸಾಣೂರಿನ ರಾಜೇಶ್ವರಿ ನ್ಯಾಷನಲ್ ಸ್ಕೂಲ್ನಲ್ಲಿ ನಡೆಯಲಿದೆ. ಸಾಹಿತಿ, ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಕೋಟೆ ಎಸ್. ರಾಮ ಭಟ್ಟ ಸಮ್ಮೇಳನಾಧ್ಯಕ್ಷರಾಗಿದ್ದು, ಸಾಹಿತ್ಯ ಸಮ್ಮೇಳನ ಕಾರ್ಕಳದ ಹಬ್ಬ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ತಿಳಿಸಿದರು. ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸುವುದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಮಳಿಗೆ ಉದ್ಘಾಟನೆ ಹಾಗೂ ದಶಪ್ರಭಾ ಸ್ಮರಣ ಸಂಚಿಕೆ ಅನಾವರಣ ನಡೆಯಲಿದೆ ಎಂದರು.

ಸಮ್ಮೇಳನದಲ್ಲಿ ಮೂರು ವಿಚಾರಗೋಷ್ಠಿಗಳು ನಡೆಯಲಿವೆ. ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯದ ಸ್ಥಿತಿಗತಿಗಳ ಕುರಿತು ಸಂವಾದ, ಕಾರ್ಕಳದ ಸಾಹಿತಿಗಳ ಕುರಿತು ವಿದ್ಯಾರ್ಥಿ ಗೋಷ್ಠಿ ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಜಾನಪದ ವಿದ್ವಾಂಸ ಡಾ. ಪ್ರಭಾಕರ್ ಜೋಶಿ ಅವರ ವಿಶೇಷ ಉಪನ್ಯಾಸ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಯುವ ಸಾಹಿತ್ಯ ರತ್ನ, ಸೃಜನ ಸಾಹಿತ್ಯ ಸೌರಭ, ಕರುನಾಡ ಸಿರಿ ಹಾಗೂ ಪುಸ್ತಕ ಪರಿಚಾರಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲೆಯ ಸ್ಥಾಪಕಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಸಮಾರೋಪ ಭಾಷಣ ಮಾಡಲಿದ್ದು, ಸಮ್ಮೇಳನಾಧ್ಯಕ್ಷ ಕೋಟೆ ಎಸ್. ರಾಮ ಭಟ್ಟ ಪ್ರತಿಸ್ಪಂದನೆ ನೀಡಲಿದ್ದಾರೆ.

ಹತ್ತು ಸಾಧಕರಿಗೆ ಗೌರವ: ಶಿಕ್ಷಣ ಕ್ಷೇತ್ರದಲ್ಲಿ ಲಕ್ಷ್ಮಣ ಕುಕ್ಕುಜೆ, ಯಕ್ಷಗಾನದಲ್ಲಿ ಗಣೇಶ್ ಶೆಟ್ಟಿ ಸಾಣೂರು, ಸಮಾಜಸೇವೆಯಲ್ಲಿ ಮಾಲಿನಿ ರೈ, ಮಾಧ್ಯಮದಲ್ಲಿ ಪಾರ್ಶ್ವನಾಥ ಜೈನ್, ಸಾಹಿತ್ಯದಲ್ಲಿ ಮಹಮ್ಮದ್ ರಿಯಾಝ್, ಸಂಕೀರ್ಣ ವಿಭಾಗದಲ್ಲಿ ಸತೀಶ್ ಜಿ. ಶೆಟ್ಟಿ, ದೈವಾರಾಧನೆಯಲ್ಲಿ ದೇಜು ಪಾಣಾರ, ಕೃಷಿಯಲ್ಲಿ ಫೆಲ್ಸಿ ಡೆನಿಸ್ ಕೆರ್ಡೋಜ ಪಟ್ಲ, ಸಂಶೋಧನೆಯಲ್ಲಿ ರತ್ನಾಕರ ನಾಯ್ಕ ಮಿಯ್ಯಾರು ಹಾಗೂ ತುಳುನಾಡ ಕನ್ನಡಿಗ ವಿಭಾಗದಲ್ಲಿ ನವೀನ್ ಕೆ. ಇನ್ನಾ ಅವರನ್ನು ಸನ್ಮಾನಿಸಲಾಗುವುದು ಎಂದು ಕೊಂಡಳ್ಳಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ರಾಜೇಶ್ವರಿ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಮೋಹನ್ ಪಡಿವಾಳ್, ನಿತ್ಯಾನಂದ ಪೈ, ದೇವದಾಸ್ ಕೆರೆಮನೆ ಹಾಗೂ ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.


