ಉಡುಪಿ : ಸಾಸ್ತಾನ ಟೋಲ್ ಗೇಟ್ ಬಳಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವೃದ್ಧರೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ, ಉಡುಪಿಯ ಬೆಳಕು ಆಶ್ರಮದಲ್ಲಿ ತುರ್ತು ಪುನರ್ವಸತಿ ಕಲ್ಪಿಸಿದ್ದಾರೆ. ರಕ್ಷಿಸಲ್ಪಟ್ಟ ವೃದ್ಧರನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಅಂಚೆ ವ್ಯಾಪ್ತಿಯ ಜಂಜನಬೈಲ್ ತಾಂಡಾದ ನಿವಾಸಿ ಗೋವಿಂದ ಗಂಗಪ್ಪ ಲಮಾಣಿ ಎಂದು ಗುರುತಿಸಲಾಗಿದೆ.

ವೃದ್ಧರ ರಕ್ಷಣಾ ಕಾರ್ಯಕ್ಕೆ ಕೋಟ ಆರಕ್ಷಕ ಠಾಣೆಯ ಸಿಬ್ಬಂದಿ ಹಾಗೂ ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಗಳಾದ ಯೋಗೀಶ್ ಕುಮಾರ್ ಮತ್ತು ಶಿವಪ್ಪ ಸಹಕರಿಸಿದ್ದಾರೆ. ವೃದ್ಧರ ಗುರುತು ಪತ್ತೆಯಾದ ಬಳಿಕ ನಿತ್ಯಾನಂದ ಒಳಕಾಡು ಅವರು ಈ ಕುರಿತು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಪಂದಿಸಿದ ಪೊಲೀಸರು ಸಂಬಂಧಪಟ್ಟ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.

ವೃದ್ಧರು ಮನೆಯಿಂದ ನಾಪತ್ತೆಯಾಗಿದ್ದು, ಅವರ ಕುಟುಂಬದವರು ಹುಡುಕಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಬಳಿಕ ಉಡುಪಿಗೆ ಆಗಮಿಸಿದ ಕುಟುಂಬದವರಿಗೆ ವೃದ್ಧರನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು. ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರಿಗೆ ತುರ್ತು ನೆರವು ನೀಡಿ ಆಶ್ರಯ ಕಲ್ಪಿಸಿದ ನಿತ್ಯಾನಂದ ಒಳಕಾಡು ಹಾಗೂ ಸಹಕಾರ ನೀಡಿದ ಪೊಲೀಸ್ ಮತ್ತು ಟೋಲ್ ಗೇಟ್ ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.


