ಉಡುಪಿ: ಭಾರತೀಯ ಸಂಸ್ಕೃತಿಯ ಉಳಿವಿನಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಯುವಜನತೆಯೇ ನಾಳಿನ ಸಮಾಜದ ರೂವಾರಿಗಳು. ಆಧುನಿಕತೆ ಮತ್ತು ತಂತ್ರಜ್ಞಾನದ ಪ್ರಭಾವದ ನಡುವೆಯೂ ಪಾಶ್ಚಿಮಾತ್ಯ ಜೀವನಶೈಲಿಗೆ ಮಾರುಹೋಗದೆ, ನಮ್ಮ ಸನಾತನ ಮೌಲ್ಯಗಳಾದ ಹಿರಿಯರಿಗೆ ಗೌರವ ನೀಡುವುದು, ಸಹಿಷ್ಣುತೆ, ಕುಟುಂಬ ವ್ಯವಸ್ಥೆ ಹಾಗೂ ‘ವಸುಧೈವ ಕುಟುಂಬಕಂ’ ಎಂಬ ವಿಶಾಲ ಮನೋಭಾವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶಂಕರನಾರಾಯಣದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ಯುವ ಸೌರಭ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗಬಾರದು. ದೇಶದ ಭವ್ಯ ಇತಿಹಾಸ, ನೃತ್ಯ, ಸಂಗೀತ, ಸಾಹಿತ್ಯ ಹಾಗೂ ಪರಂಪರೆಯನ್ನು ಪರಿಚಯಿಸುವ ಮಾಧ್ಯಮವಾಗಬೇಕು. ಯುವ ಸಮುದಾಯವು ವೈಜ್ಞಾನಿಕ ಮನೋಭಾವದ ಜತೆಗೆ ತನ್ನ ಸಾಂಸ್ಕೃತಿಕ ಬೇರುಗಳ ಬಗ್ಗೆಯೂ ಹೆಮ್ಮೆ ಹೊಂದಬೇಕು. ಆಚರಣೆಗಳ ಹಿಂದಿರುವ ಅರ್ಥಪೂರ್ಣ ತತ್ವಗಳನ್ನು ಅರಿತು ಅನುಸರಿಸಿದಾಗ ಮಾತ್ರ ಭಾರತೀಯ ಸಂಸ್ಕೃತಿ ಜೀವಂತವಾಗಿ ಮುಂದಿನ ಪೀಳಿಗೆಗೆ ನಿರಂತರವಾಗಿ ಹರಿಯಲು ಸಾಧ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಂಕರನಾರಾಯಣ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಪ್ಪ ಪೂಜಾರಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದಿವ್ಯಾ ಎಂ. ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ. ನಳಿನಾಶ್ರೀ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಗಂಗಾಧರ ಆರ್. ಎಚ್. ಕಾರ್ಯಕ್ರಮ ನಿರೂಪಿಸಿದರು.

‘ಯುವ ಸೌರಭ’ ಕಾರ್ಯಕ್ರಮದಲ್ಲಿ ಶ್ಯಾಮ್ ಜಿ.ಎಸ್. ಪೂಜಾರಿ ಗಂಗೊಳ್ಳಿ ಅವರಿಂದ ಕೊಳಲು ವಾದನ, ಅನಿಲ್ ಬಿತ್ತಿ ಮತ್ತು ತಂಡದಿಂದ ವೀರಗಾಸೆ, ಪ್ರಶಾಂತ್ ಬಿತ್ತಿ ಮತ್ತು ತಂಡದಿಂದ ಕಂಸಾಳೆ, ಚೈತನ್ಯ ಮತ್ತು ತಂಡದಿಂದ ಜನಪದ ಸಂಗೀತ ಪ್ರದರ್ಶನಗೊಂಡವು. ಸಾವಿತ್ರಿ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು. ಕಾಲೇಜಿನ ಯಕ್ಷಗಾನ ತಂಡದಿಂದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನಗೊಂಡು ಪ್ರೇಕ್ಷಕರ ಗಮನ ಸೆಳೆಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ವೇದಿಕೆಯಾಯಿತು.


