ಉಡುಪಿ : ಸಾಹಿತ್ಯ ಕೃತಿಗಳು ಬದುಕನ್ನು ಸೂಕ್ಷ್ಮವಾಗಿ ಅರ್ಥೈಸಲು ಸಹಕಾರಿಯಾಗುತ್ತವೆ. ಜೀವನದ ಗೆಲುವು ಮತ್ತು ಸೋಲುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ಅರಿಯಲು ಸಾಹಿತ್ಯ ನೆರವಾಗುತ್ತದೆ. ಆದ್ದರಿಂದ ಯುವಜನರು ಸಾಹಿತ್ಯ ಕೃತಿಗಳನ್ನು ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಡಾ. ರೇಖಾ ವಿ. ಬನ್ನಾಡಿ ಹೇಳಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅಜ್ಜರಕಾಡಿನ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ನಡೆದ ‘ಗ್ರಂಥಾಲಯದಲ್ಲಿ ನಮ್ಮ ಸಾಹಿತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರಾವಳಿ ಪ್ರದೇಶವು ಸಮೃದ್ಧ ಸಾಂಸ್ಕೃತಿಕ ಹಾಗೂ ಮೌಖಿಕ ಪರಂಪರೆಯನ್ನು ಹೊಂದಿದೆ. ಈ ಪರಂಪರೆಯ ಪ್ರತಿಬಿಂಬವನ್ನು ಇಲ್ಲಿನ ಕಥೆ, ಕವನ ಹಾಗೂ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಹೇಳುವ ಮತ್ತು ಕೇಳುವ ಅಭ್ಯಾಸ ಕ್ಷೀಣಿಸುತ್ತಿದ್ದು, ಸಾಹಿತ್ಯವನ್ನು ಆಸ್ವಾದಿಸುವ ಮನಸ್ಸುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.

ಒಂದು ಕಾಲದಲ್ಲಿ ಓದುಗರಿಂದ ತುಂಬಿರುತ್ತಿದ್ದ ಗ್ರಂಥಾಲಯಗಳು ಇಂದು ಓದುಗರ ಕೊರತೆ ಎದುರಿಸುತ್ತಿವೆ. ಕುವೆಂಪು, ಶಿವರಾಮ ಕಾರಂತ, ವೈದೇಹಿ, ಸಾರಾ ಅಬೂಬಕ್ಕರ್, ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಹಾಗೂ ದೇವನೂರ ಮಹಾದೇವ ಅವರಂತಹ ಮೇರು ಸಾಹಿತಿಗಳನ್ನು ಕೊಡುಗೆಯಾಗಿ ನೀಡಿದ ನಾಡಿನಲ್ಲಿ ಪುಸ್ತಕಗಳು ಕಪಾಟುಗಳಿಗೆ ಸೀಮಿತವಾಗುತ್ತಿರುವುದು ಕಳವಳಕಾರಿ ಸಂಗತಿ. ಬದಲಾಗುತ್ತಿರುವ ಸಮಾಜದ ಆದ್ಯತೆಗಳು ಇದಕ್ಕೆ ಪ್ರಮುಖ ಕಾರಣವಾಗಿವೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಗ್ರಂಥಾಲಯಗಳು ಆಯೋಜಿಸುವ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದರು.

ಇಂದಿನ ಲಾಭ-ನಷ್ಟದ ಲೆಕ್ಕಾಚಾರದ ಬದುಕಿನಲ್ಲಿ ಸಾಹಿತ್ಯದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಮಾನಸಿಕ ಒತ್ತಡದ ಬದುಕನ್ನು ಧೈರ್ಯ ಮತ್ತು ಸಂಯಮದಿಂದ ಎದುರಿಸಲು ಸಾಹಿತ್ಯ ಸಹಕಾರಿಯಾಗಿದೆ. ವೈಚಾರಿಕ ಸಾಹಿತ್ಯದ ಮೂಲಕ ಮೂಲಭೂತ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಬಹುದು. ಎಲ್ಲರನ್ನೂ ಸಮಾನತೆ ಮತ್ತು ಸಹಾನುಭೂತಿಯಿಂದ ಕಾಣುವ ಮನೋಭಾವವನ್ನು ಸಾಹಿತ್ಯ ಬೆಳೆಸುತ್ತದೆ ಎಂದು ತಿಳಿಸಿದರು.

ಯಶಸ್ವಿ ವ್ಯಕ್ತಿಗಳ ಆತ್ಮಕಥನಗಳು ಜೀವನದ ಸವಾಲುಗಳನ್ನು ಎದುರಿಸುವ ಬಗೆಯನ್ನು ಕಲಿಸುತ್ತವೆ. ಗೆಲುವಿನ ಸಂದರ್ಭದಲ್ಲಿ ವಿನಯದಿಂದಿರಲು ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಲು ಸಾಹಿತ್ಯ ಪ್ರೇರಣೆ ನೀಡುತ್ತದೆ. ಹೀಗಾಗಿ ಯುವಜನರು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಾಹಿತ್ಯದ ಒಡನಾಟ ಹೆಚ್ಚಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಹಾಗೂ ಗೌರವ ಕಾರ್ಯದರ್ಶಿ ರಂಜನಿ ವಸಂತ್ ಉಪಸ್ಥಿತರಿದ್ದರು. ಪ್ರಥಮ ದರ್ಜೆ ಸಹಾಯಕಿ ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು.


