ಉಡುಪಿ: ಬಾಲಿವುಡ್ನ ಹಿರಿಯ ನಟ, ನಿರ್ದೇಶಕ ಹಾಗೂ ಸಾಮಾಜಿಕ ಸೇವಾ ಮನೋಭಾವದ ನಾನಾ ಪಾಟೇಕರ್ ಅವರ ನಿಧನಕ್ಕೆ ಚಿತ್ರರಂಗ ಸೇರಿದಂತೆ ದೇಶಾದ್ಯಂತ ಸಂತಾಪ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಕರಾವಳಿಯೊಂದಿಗೆ ಅವರು ಹೊಂದಿದ್ದ ನಂಟು ಹಾಗೂ ಮುಂಡ್ಕೂರು ಭಾಗಕ್ಕೆ ನೀಡಿದ ಕೊಡುಗೆಗಳು ಇದೀಗ ನೆನಪಾಗುತ್ತಿವೆ.

ನಾನಾ ಪಾಟೇಕರ್ ಅವರು ಗುರುತಿಸಿಕೊಂಡಿದ್ದು ಕೇವಲ ತಮ್ಮ ಅಭಿನಯದಿಂದ ಮಾತ್ರವಲ್ಲ. ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವಕ್ಕೂ ಹೆಸರಾಗಿದ್ದ ಅವರು, ಕಾರ್ಕಳ ತಾಲೂಕಿನ ಮುಂಡ್ಕೂರು ಪರಿಸರದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಮುಂಡ್ಕೂರು-ಮುಲ್ಲಡ್ಕದ ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರೊಂದಿಗೆ ನಾನಾ ಪಾಟೇಕರ್ ಆತ್ಮೀಯ ಸ್ನೇಹ ಹೊಂದಿದ್ದು, ಈ ಸ್ನೇಹದ ಹಿನ್ನೆಲೆಯಲ್ಲಿ ಅವರು ಹಲವು ಬಾರಿ ಮುಂಡ್ಕೂರಿಗೆ ಭೇಟಿ ನೀಡುತ್ತಿದ್ದರು.

ಸುಮಾರು 25 ವರ್ಷಗಳ ಹಿಂದೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ನಾನಾ ಪಾಟೇಕರ್ ನೆರವಿನ ಹಸ್ತ ಚಾಚಿದ್ದರು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಿಗೂ ಅವರು ದೇಣಿಗೆ ನೀಡಿದ್ದರು ಎನ್ನಲಾಗಿದೆ.

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಾತ್ರವಲ್ಲದೆ, ಮುಲ್ಲಡ್ಕದ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯೀ ದೇವಸ್ಥಾನಗಳ ಧಾರ್ಮಿಕ ಕಾರ್ಯಗಳಿಗೂ ನಾನಾ ಪಾಟೇಕರ್ ಅವರ ಕೊಡುಗೆ ಇತ್ತು. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಅವರು ನೀಡುತ್ತಿದ್ದ ಬೆಂಬಲ ಸ್ಥಳೀಯರ ಮನದಲ್ಲಿ ಅವರ ಬಗ್ಗೆ ವಿಶೇಷ ಗೌರವ ಮೂಡಿಸಿತ್ತು. ಮುಂಡ್ಕೂರಿನ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ನೇ ವರ್ಷದ ಸಂಭ್ರಮದಲ್ಲೂ ನಾನಾ ಪಾಟೇಕರ್ ನೆರವು ನೀಡಿದ್ದರು. ಸ್ಥಳೀಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಅವರು ವಿಶೇಷ ಕಾಳಜಿ ಹೊಂದಿದ್ದರು.

ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಗ್ರಂಥಾಲಯ ಹಾಗೂ ಕಂಪ್ಯೂಟರ್ ಕೊಠಡಿ ನಿರ್ಮಾಣಕ್ಕೆ ನೆರವು ನೀಡಿದ್ದ ಅವರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್ಗಳನ್ನೂ ಕೊಡುಗೆಯಾಗಿ ನೀಡಿದ್ದರು. ಮುಂಡ್ಕೂರಿನಲ್ಲಿ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸುವ ಬಗ್ಗೆಯೂ ನಾನಾ ಪಾಟೇಕರ್ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದರು. ಶಿಕ್ಷಣದ ಜತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಶಿಕ್ಷಣ ವ್ಯವಸ್ಥೆಯ ಅಗತ್ಯವನ್ನು ಅವರು ಪ್ರತಿಪಾದಿಸುತ್ತಿದ್ದರು ಎಂದು ಸ್ಥಳೀಯರು ಸ್ಮರಿಸುತ್ತಾರೆ.

ಮುಂಡ್ಕೂರಿನ ವಿವಿಧ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ತಮ್ಮದೇ ಆದ ರೀತಿಯಲ್ಲಿ ನೆರವು ನೀಡಿದ್ದ ನಾನಾ ಪಾಟೇಕರ್ ಸ್ಥಳೀಯರ ಪಾಲಿಗೆ ಆತ್ಮೀಯ ವ್ಯಕ್ತಿಯಾಗಿದ್ದರು. ಯಾವುದೇ ಆಡಂಬರವಿಲ್ಲದೆ ನೆರವು ನೀಡುತ್ತಿದ್ದ ಅವರ ಸ್ವಭಾವವನ್ನು ಮುಂಡ್ಕೂರಿನ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಬಡವರು, ರೈತರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ನಾನಾ ಅವರ ಸಾಮಾಜಿಕ ಕಾಳಜಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅವರ ನಿಧನದಿಂದ ಚಿತ್ರರಂಗವಷ್ಟೇ ಅಲ್ಲದೆ, ಅವರ ಸೇವೆಯ ಸ್ಪರ್ಶ ಪಡೆದ ಹಲವು ಸ್ಥಳಗಳಲ್ಲಿ ಇಂದು ಒಬ್ಬ ಆತ್ಮೀಯ ಹಿತೈಷಿಯನ್ನು ಕಳೆದುಕೊಂಡಂತಾಗಿದೆ.

ಮುಂಡ್ಕೂರಿನ ಪಾಲಿಗೆ ಕರ್ಣನಂತಿದ್ದ ನಾನಾ ಪಾಟೇಕರ್ ದೈಹಿಕವಾಗಿ ಅಗಲಿದರೂ, ಅವರು ನೀಡಿದ ನೆರವು, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಸಲ್ಲಿಸಿದ ಕೊಡುಗೆ ಹಾಗೂ ಮಾನವೀಯತೆಯ ನೆನಪುಗಳ ಮೂಲಕ ಕರಾವಳಿಯಲ್ಲಿ ಸದಾ ಅಮರರಾಗಿರಲಿದ್ದಾರೆ.


