Tuesday, October 6, 2026

spot_img

ಉಳ್ತೂರಿನಲ್ಲಿ ಎಫ್‌ಎಸ್‌ಟಿಪಿ ವಿರುದ್ಧ ಮತ್ತೆ ಭುಗಿಲೆದ್ದ ಆಕ್ರೋಶ

ಉಡುಪಿ : ಮಲತ್ಯಾಜ್ಯ ಸಂಸ್ಕರಣಾ ಘಟಕ (ಎಫ್‌ಎಸ್‌ಟಿಪಿ) ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ತೂರಿನಲ್ಲಿ ಗ್ರಾಮಸ್ಥರ ಹೋರಾಟ ಮತ್ತೆ ತೀವ್ರಗೊಂಡಿದ್ದು ಮಂಗಳವಾರ ಮತ್ತೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸುಮಾರು 14 ವರ್ಷಗಳಿಂದ ತ್ಯಾಜ್ಯ ಘಟಕದ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿರುವ ಸ್ಥಳೀಯರು, ಇದೀಗ ಅದೇ ಪ್ರದೇಶದಲ್ಲಿ ಎಫ್‌ಎಸ್‌ಟಿಪಿ ನಿರ್ಮಾಣಕ್ಕೆ ಮುಂದಾಗಿರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕ್ರಮಕ್ಕೆ ಪ್ರತಿಭಟನೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಉಳ್ತೂರು ಗ್ರಾಮದ ಸರ್ವೆ ನಂ. 219/2ರಲ್ಲಿರುವ 2.07 ಎಕರೆ ಜಾಗವನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಈ ಹಿಂದೆ ಡಂಪಿಂಗ್ ಯಾರ್ಡ್ ನಿರ್ಮಾಣಕ್ಕಾಗಿ ಖರೀದಿಸಿತ್ತು. ಆದರೆ ಸ್ಥಳೀಯರ ನಿರಂತರ ವಿರೋಧ, ಪ್ರತಿಭಟನೆ ಹಾಗೂ ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಡಂಪಿಂಗ್ ಯಾರ್ಡ್ ಕಾಮಗಾರಿಯನ್ನು ಕೈಬಿಡಲಾಗಿತ್ತು. ಇದೀಗ ಅದೇ ಜಾಗದಲ್ಲಿ ಯೋಜನೆಯ ಸ್ವರೂಪ ಬದಲಿಸಿ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಹಾಗೂ ಎಸ್‌ಬಿಎಂ (ಯು) 2.0 ಅನುದಾನದಡಿ ಎಫ್‌ಎಸ್‌ಟಿಪಿ ನಿರ್ಮಿಸಲು ಮುಂದಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಎಫ್‌ಎಸ್‌ಟಿಪಿ ವಿರುದ್ಧ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿರುವ ಉಳ್ತೂರು, ಬೇಳೂರು ಹಾಗೂ ಕೆದೂರು ಭಾಗದ ಗ್ರಾಮಸ್ಥರು ಮಂಗಳವಾರ ಮತ್ತೆ ಬೀದಿಗಿಳಿದರು. ಪ್ರತಿಭಟನೆಗೂ ಮುನ್ನ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸ್ಥಳೀಯರು, ಬಳಿಕ ದೇವಳದಿಂದ ಎಫ್‌ಎಸ್‌ಟಿಪಿ ನಿರ್ಮಾಣಕ್ಕೆ ಉದ್ದೇಶಿಸಿರುವ ಸ್ಥಳದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೈಯಲ್ಲಿ ಪ್ರತಿಭಟನಾ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಸಾಗಿದ ಗ್ರಾಮಸ್ಥರು, ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಮಗಾರಿ ಸ್ಥಳಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು. ಬಳಿಕ ಮೆರವಣಿಗೆಯಾಗಿ ಕಾಮಗಾರಿ ಸ್ಥಳದತ್ತ ತೆರಳಿ ಪ್ರತಿಭಟನೆ ಮುಂದುವರಿಸಿದರು.

ಎಫ್‌ಎಸ್‌ಟಿಪಿ ನಿರ್ಮಾಣದ ಹೊಸ ಯೋಜನೆ ಕುರಿತು ಸ್ಥಳೀಯರಿಗೆ ಸಮರ್ಪಕ ಮಾಹಿತಿ ನೀಡಿಲ್ಲ. ಯೋಜನೆಯ ಬಗ್ಗೆ ಮಾಹಿತಿ ನೀಡಿ, ಅಗತ್ಯ ದಾಖಲೆಗಳನ್ನು ಒದಗಿಸಿ, ಕಾನೂನು ಹೋರಾಟ ನಡೆಸಲು ಕಾಲಾವಕಾಶ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದರೂ ಅದಕ್ಕೆ ಅವಕಾಶ ನೀಡದೆ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿರುವುದು ಗ್ರಾಮಸ್ಥರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದು, ಕಾಮಗಾರಿ ಆರಂಭಿಸುವ ಪ್ರಯತ್ನಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಎಫ್‌ಎಸ್‌ಟಿಪಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಕುಂದಾಪುರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣದ ವಿಚಾರವಾಗಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ನ್ಯಾಯಾಲಯ ಕಮಿಷನರ್ ಅವರನ್ನು ನೇಮಕ ಮಾಡಿದ್ದು, ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವವರೆಗೆ ಕಾಮಗಾರಿ ಆರಂಭಿಸಬಾರದು ಎಂಬುದು ಗ್ರಾಮಸ್ಥರ ಒತ್ತಾಯಿಸಿದರು. ಅಲ್ಲದೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮೊದಲು ಕೆದೂರು ಗ್ರಾಮ ಪಂಚಾಯಿತಿಯ ಒಪ್ಪಿಗೆ ಹಾಗೂ ದೃಢೀಕರಣ ಪಡೆಯಬೇಕು. ಕಾಮಗಾರಿಗೆ ಸಂಬಂಧಿಸಿದ ಡಿಪಿಆರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವಾಗಲೇ ಕಾಮಗಾರಿ ಆರಂಭಿಸುವುದು ಸರಿಯಲ್ಲ. ಕಮಿಷನರ್ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವವರೆಗೆ ಕಾಯಬೇಕು. ನಮಗೆ ಕಾನೂನು ಹೋರಾಟ ನಡೆಸಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.​​

ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಮಿನಿ ಎಂಆರ್‌ಎಫ್ ಘಟಕ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 15 ಪಂಚಾಯಿತಿಗಳ ಘನ ತ್ಯಾಜ್ಯ ಇಲ್ಲಿಗೆ ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈಗಾಗಲೇ ಘನ ತ್ಯಾಜ್ಯದ ಹೊರೆ ಹೊತ್ತಿರುವ ಪ್ರದೇಶಕ್ಕೆ ಮತ್ತೊಂದು ಮಲತ್ಯಾಜ್ಯ ಸಂಸ್ಕರಣಾ ಘಟಕ ಬಂದರೆ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಗ್ರಾಮಸ್ಥರ ಆತಂಕ.

ಒಂದೆಡೆ ಘನ ತ್ಯಾಜ್ಯ, ಮತ್ತೊಂದೆಡೆ ಮಲತ್ಯಾಜ್ಯ ಸಂಸ್ಕರಣಾ ಘಟಕ. ಎರಡೂ ಘಟಕಗಳ ಹೊರೆ ಒಂದೇ ಊರಿನ ಮೇಲೆ ಬಿದ್ದರೆ ಮುಂದಿನ ದಿನಗಳಲ್ಲಿ ದುರ್ವಾಸನೆ, ಸೊಳ್ಳೆ-ಕೀಟಗಳ ಹಾವಳಿ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗಬೇಕಾಗುತ್ತದೆ. ನಮ್ಮ ಊರನ್ನೇ ತ್ಯಾಜ್ಯ ಘಟಕಗಳ ಪ್ರದೇಶವನ್ನಾಗಿ ಮಾಡುವುದನ್ನು ಒಪ್ಪುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಎಫ್‌ಎಸ್‌ಟಿಪಿ ವಿರುದ್ಧ ಉಳ್ತೂರು, ಬೇಳೂರು ಹಾಗೂ ಕೆದೂರು ಭಾಗದ ಗ್ರಾಮಸ್ಥರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಇದೀಗ ಪೊಲೀಸ್ ಭದ್ರತೆಯ ನಡುವೆ ಕಾಮಗಾರಿ ಮುಂದುವರಿಸಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಿಸುತ್ತಿದ್ದಾರೆ. ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಮಗಾರಿ ನಿಲ್ಲಿಸಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದ್ದು, ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles