Tuesday, September 29, 2026

spot_img

ಹೃದಯ ಆರೋಗ್ಯ ಜಾಗೃತಿಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ 3ಡಿ ಶಿಲ್ಪ ಅನಾವರಣ

ಉಡುಪಿ: ವಿಶ್ವ ಹೃದಯ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೃದಯ ಆರೋಗ್ಯದ ಮಹತ್ವ ಸಾರುವ 3ಡಿ ಜಾಗೃತಿ ಶಿಲ್ಪವನ್ನು ಮಂಗಳವಾರ ಅನಾವರಣಗೊಳಿಸಲಾಯಿತು. ಆಸ್ಪತ್ರೆಯ ನೆಲಮಹಡಿಯ ಒಪಿಡಿ ಲಾಂಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಶಿಲ್ಪವನ್ನು ಅನಾವರಣಗೊಳಿಸಿದರು.

 ಮಾಹೆಯ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗ ಹಾಗೂ ಹೃದಯ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡೋಂಟ್ ಮಿಸ್ ಎ ಬೀಟ್ ಎಂಬುದು ಈ ವರ್ಷದ ವಿಶ್ವ ಹೃದಯ ದಿನದ ಸಂದೇಶವಾಗಿದೆ. ಈ ಆಶಯವನ್ನು ಕಲಾತ್ಮಕವಾಗಿ ಬಿಂಬಿಸುವ 3ಡಿ ಶಿಲ್ಪವನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಶ್ರೀನಾಥ್ ಮಣಿಪಾಲ್ ರೂಪಿಸಿದ್ದಾರೆ.ಆಸ್ಪತ್ರೆಯ ಜನನಿಬಿಡ ಸ್ಥಳಗಳಲ್ಲಿ ಒಂದಾದ ಒಪಿಡಿ ಲಾಂಜ್‌ನಲ್ಲಿ ಶಿಲ್ಪವನ್ನು ಸ್ಥಾಪಿಸಲಾಗಿದ್ದು, ರೋಗಿಗಳು, ಆರೈಕೆದಾರರು ಹಾಗೂ ಸಂದರ್ಶಕರಿಗೆ ಹೃದಯದ ಆರೋಗ್ಯದ ಮಹತ್ವವನ್ನು ನಿರಂತರವಾಗಿ ನೆನಪಿಸುವ ಉದ್ದೇಶ ಹೊಂದಿದೆ. ಶಿಲ್ಪ ಅನಾವರಣಗೊಳಿಸಿ ಮಾತನಾಡಿದ ಡಾ. ಅವಿನಾಶ್ ಶೆಟ್ಟಿ, ಭಾರತದಲ್ಲಿ ಸಾವಿಗೆ ಪ್ರಮುಖ ಕಾರಣಗಳಲ್ಲಿ ಹೃದ್ರೋಗವೂ ಒಂದಾಗಿದೆ. ಆದರೆ ಹೃದ್ರೋಗದ ಅನೇಕ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ. ಎದೆನೋವು ಅಥವಾ ಎದೆಯಲ್ಲಿ ಅಸ್ವಸ್ಥತೆ, ಉಸಿರಾಟದ ತೊಂದರೆ ಹಾಗೂ ಅಸಹಜ ಆಯಾಸದಂತಹ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಅಪಾಯ ಹೆಚ್ಚಾಗಬಹುದು ಎಂದು ಎಚ್ಚರಿಸಿದರು.

ಪ್ರತಿದಿನ ಸಾವಿರಾರು ಜನರು ಆಸ್ಪತ್ರೆಯ ಒಪಿಡಿ ಲಾಂಜ್ ಮೂಲಕ ಹಾದುಹೋಗುತ್ತಾರೆ. ಅವರಲ್ಲಿ ಪ್ರತಿಯೊಬ್ಬರೂ ಕ್ಷಣಕಾಲ ನಿಂತು ತಮ್ಮ ಹೃದಯದ ಆರೋಗ್ಯದ ಬಗ್ಗೆ ಯೋಚಿಸುವಂತೆ ಈ ಶಿಲ್ಪ ಪ್ರೇರೇಪಿಸಲಿ ಎಂಬುದು ನಮ್ಮ ಆಶಯ. ಈ ವರ್ಷದ ವಿಶ್ವ ಹೃದಯ ದಿನದ ಸಂದೇಶಕ್ಕೆ ಅರ್ಥಪೂರ್ಣ ರೂಪ ನೀಡಿದ ಶ್ರೀನಾಥ್ ಮತ್ತು ಡಾ. ಅಶ್ವಿನಿ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಆರೋಗ್ಯಕರ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆ, ತಂಬಾಕು ಸೇವನೆಯಿಂದ ದೂರವಿರುವುದು ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಹೃದಯದ ಯಾವುದೇ ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸದೆ ಸಕಾಲದಲ್ಲಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಪರಮಶಿವಂ, ಹೃದಯ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಕಾಮತ್ ಸೇವಗೂರ್, ಪ್ರಾಧ್ಯಾಪಕ ಡಾ. ಟಾಮ್ ದೇವಾಸಿಯಾ ಸೇರಿದಂತೆ ವೈದ್ಯರು, ಬೋಧಕ ಸಿಬ್ಬಂದಿ, ಶುಶ್ರೂಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles