ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರ 138ನೇ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ 59ನೇ ಬೂತ್ ಬಳ್ಕೂರಿನಲ್ಲಿ ಭಾನುವಾರ ಸಾಮೂಹಿಕವಾಗಿ ವೀಕ್ಷಿಸಲಾಯಿತು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು ಅವರ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್. ಸೇರಿದಂತೆ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮನ್ ಕೀ ಬಾತ್ ಜನಸಾಮಾನ್ಯರ ಮನದ ಮಾತಾಗಿದ್ದು, ಪ್ರಧಾನಿಯವರ ಸಂದೇಶ ದೇಶದ ನಾಗರಿಕರಲ್ಲಿ ರಾಷ್ಟ್ರಭಕ್ತಿ ಹಾಗೂ ಸೇವಾ ಮನೋಭಾವವನ್ನು ಜಾಗೃತಗೊಳಿಸುತ್ತದೆ ಎಂದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಮನ್ ಕೀ ಬಾತ್ ಮೂಲಕ ಪ್ರಧಾನಿ ದೇಶದಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬದಲಾವಣೆಗಳು ಹಾಗೂ ಜನಸಾಮಾನ್ಯರ ಸಾಧನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಶಿರೂರು ಮೂರ್ಕೈ, ಎಸ್ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಬಳ್ಕೂರು, ಬಳ್ಕೂರು ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಶೇರಿಗಾರ್, ಕಾರ್ಯದರ್ಶಿ ಕೃಷ್ಣರಾಜ್, ಬೂತ್ ಅಧ್ಯಕ್ಷ ಉದಯ ಪೂಜಾರಿ, ಮಂಜುನಾಥ ಮೊಗವೀರ, ಲಕ್ಷ್ಮಣ ಪೂಜಾರಿ ಬಳ್ಕೂರು, ನಾಗರಾಜ ಗಾಣಿಗ, ರಾಮು ಶೇರಿಗಾರ್, ರಾಜು ಪುತ್ರನ್, ನಾಗರಾಜ ಕುಲಾಲ್ ಸೇರಿದಂತೆ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


