ಉಡುಪಿ : ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದಲ್ಲಿ ತೆರವುಗೊಳಿಸಿರುವ ಪರಶುರಾಮನ ಪ್ರತಿಮೆಯನ್ನು ಮರುಸ್ಥಾಪಿಸುವಂತೆ ಸಲ್ಲಿಸಿರುವ ಮನವಿಯ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರತಿಮೆ ಮರುಸ್ಥಾಪನೆಗೆ ಆಗ್ರಹಿಸಿ ಉಡುಪಿ ತಾಲೂಕಿನ ವರಂಗ ಗ್ರಾಮದ ಉದಯ ಶೆಟ್ಟಿ ಮುನಿಯಾಲು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಟಿ.ಪಿ. ವಿವೇಕಾನಂದ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ವಕೀಲ ವಿ.ಕೆ. ಶ್ರೀಕಾಂತ್ ವಾದ ಮಂಡಿಸಿದರು.

ಪ್ರತಿಮೆಯನ್ನು ಮರುಸ್ಥಾಪಿಸುವಂತೆ ರಾಜ್ಯ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಗೆ 2025ರ ಜುಲೈ 24ರಂದು ಮನವಿ ಸಲ್ಲಿಸಲಾಗಿದ್ದು, ಈ ಕುರಿತು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಅರ್ಜಿಯಲ್ಲಿನ ವಿಚಾರಗಳು ವಾಸ್ತವಾಂಶಗಳಿಗೆ ಸಂಬಂಧಿಸಿರುವುದರಿಂದ, ಅರ್ಜಿದಾರರು ಸಲ್ಲಿಸಿರುವ ಮನವಿಯ ಬಗ್ಗೆ ಸರಕಾರವೇ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿತು. ಮನವಿ ಪರಿಶೀಲಿಸುವ ವೇಳೆ ಉಡುಪಿ ನಿರ್ಮಿತಿ ಕೇಂದ್ರಕ್ಕೆ ನೋಟಿಸ್ ನೀಡಿ, ಅವರ ವಾದವನ್ನೂ ಆಲಿಸುವಂತೆ ಸರಕಾರಕ್ಕೆ ಸೂಚಿಸಿತು. ಬಳಿಕ ಅರ್ಜಿಯನ್ನು ಇತ್ಯರ್ಥಪಡಿಸಿತು.

ಉಮಿಕಲ್ ಬೆಟ್ಟದಲ್ಲಿ 33 ಅಡಿ ಎತ್ತರದ ಪರಶುರಾಮನ ಪ್ರತಿಮೆಯನ್ನು 2023ರ ಜನವರಿ 27ರಂದು ಅನಾವರಣಗೊಳಿಸಲಾಗಿತ್ತು. ಬಳಿಕ ಪ್ರತಿಮೆ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಹಾಗೂ ಕಂಚಿನ ಪ್ರತಿಮೆ ಬದಲು ಹಿತ್ತಾಳೆಯ ಪ್ರತಿಮೆ ಅಳವಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ನಂತರ ಸುರಕ್ಷತಾ ಕಾರಣಗಳನ್ನು ಮುಂದಿಟ್ಟು ಪ್ರತಿಮೆಯನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಪ್ರತಿಮೆಯನ್ನು ಪುನರ್ನಿರ್ಮಿಸಿ ಮರುಸ್ಥಾಪಿಸಬೇಕು ಹಾಗೂ ಧಾರ್ಮಿಕ ಭಾವನೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕು ಎಂದು ಕೋರಿ ಉದಯ ಶೆಟ್ಟಿ ಮುನಿಯಾಲು ಹೈಕೋರ್ಟ್ ಮೆಟ್ಟಿಲೇರಿದ್ದರು.


