ಉಡುಪಿ : ರಾಯಚೂರು ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಹಾಗೂ ದಲಿತರ ಭೂಮಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಉಡುಪಿಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿಯ ಕರೆಯ ಮೇರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಮಿತಿ, ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಕೃಷಿಕೂಲಿಕಾರರ ಸಂಘ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ರಾಯಚೂರು ಘಟನೆಗಳ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ದಲಿತ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಹಾಗೂ ದಲಿತರಿಗೆ ಸಂಬಂಧಿಸಿದ ಭೂಮಿ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಆಗ್ರಹಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಕಾರ್ಯದರ್ಶಿ ರವಿ ವಿ.ಎಂ., ಮುಖಂಡರಾದ ಅಶ್ವಿನಿ ಲಾರೆನ್ಸ್ ಮೂಡುಬೆಳ್ಳೆ, ಮನೋಜ್ ಕುಮಾರ್, ನಾಗರತ್ನ ಆರ್. ನಾಡ, ಸುಶೀಲಾ ಬಳ್ಕೂರು, ಅಣ್ಣಪ್ಪ ಬಳ್ಕೂರು, ಬಾಬು ಬಳ್ಕೂರು, ದಯಾನಂದ ಮಲ್ಪೆ, ರಾಮ ಕಾರ್ಕಡ, ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ್ ಗೊಲ್ಲ, ಕಾರ್ಯದರ್ಶಿ ಚಂದ್ರಶೇಖರ್ ವಿ., ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್, ಉಪಾಧ್ಯಕ್ಷ ಎಚ್. ನರಸಿಂಹ, ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಡಿವೈಎಫ್ಐ ಮುಖಂಡರಾದ ಸೈಯದ್, ಮುರಳಿ, ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಬಲ್ಕೀಸ್, ಸುನೀತಾ ಶೆಟ್ಟಿ, ಕೃಷಿಕೂಲಿಕಾರರ ಸಂಘದ ಮುಖಂಡರಾದ ನಾಗರತ್ನ ನಾಡ, ಇದ್ರೀಸ್ ಹೂಡೆ, ಹಯವದನ ಮೂಡುಸಗ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


