ಉಡುಪಿ: ಕಾಪು ತಾಲೂಕಿನ ಸುಭಾಷ್ ನಗರದ ಕೊಬ್ಬರಿ ಘಟಕವೊಂದರಲ್ಲಿ ಶನಿವಾರ ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕೊಬ್ಬರಿ ದಾಸ್ತಾನು ಸುಟ್ಟುಹೋದ ಘಟನೆ ನಡೆದಿದೆ.

ನಳಿನಿ ಪುಷ್ಪಲತಾ ಸಾಲಿಯನ್ಸ್ ಅವರ ಮಾಲಕತ್ವದ ಕೊಬ್ಬರಿ ಘಟಕದಲ್ಲಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕಿಟ್ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಕ್ಷಣಾರ್ಧದಲ್ಲೇ ಘಟಕದಲ್ಲಿದ್ದ ಕೊಬ್ಬರಿ ದಾಸ್ತಾನಿಗೆ ಬೆಂಕಿ ವ್ಯಾಪಿಸಿದ್ದು, ದಟ್ಟ ಹೊಗೆ ಆವರಿಸಿತ್ತು.

ಘಟನೆ ಗಮನಕ್ಕೆ ಬಂದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಉಡುಪಿಯಿಂದ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿ ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯಲಾಯಿತು.

ಘಟಕದಲ್ಲಿ ಹಲವು ವರ್ಷಗಳಿಂದ ದಾಸ್ತಾನಿಟ್ಟಿದ್ದ ಅಪಾರ ಪ್ರಮಾಣದ ಕೊಬ್ಬರಿ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪ್ರಾಥಮಿಕ ಅಂದಾಜಿನಂತೆ ಸುಮಾರು 10ರಿಂದ 15 ಲಕ್ಷ ರೂ. ನಷ್ಟವಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಹಾಗೂ ಸಂಭವಿಸಿರುವ ನಷ್ಟದ ಪ್ರಮಾಣದ ಕುರಿತು ಪರಿಶೀಲನೆ ನಡೆಯುತ್ತಿದೆ.


