ಉಡುಪಿ: ಚಲಿಸುತ್ತಿದ್ದ ವಿದ್ಯುತ್ ಸ್ಕೂಟಿಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಉಡುಪಿಯಲ್ಲಿ ನಡೆದಿದೆ. ಸಮಯಪ್ರಜ್ಞೆ ಮೆರೆದ ಸವಾರ ಸ್ಕೂಟಿಯನ್ನು ರಸ್ತೆ ಮಧ್ಯೆಯೇ ನಿಲ್ಲಿಸಿ ತಕ್ಷಣ ದೂರ ಸರಿದ ಪರಿಣಾಮ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕಗೊಂಡ ಸವಾರ ಕೂಡಲೇ ಸ್ಕೂಟಿಯನ್ನು ನಿಲ್ಲಿಸಿ ದೂರ ಓಡಿ ಹೋಗಿದ್ದಾರೆ. ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡು ಸ್ಕೂಟಿ ಹೊತ್ತಿ ಉರಿದಿದೆ ಎನ್ನಲಾಗಿದೆ.

ಬಳಿಕ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಕೂಟಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ವಿದ್ಯುತ್ ಸ್ಕೂಟಿಯ ಬ್ಯಾಟರಿ ಅಥವಾ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆಯೇ ಎಂಬುದು ಪರಿಶೀಲನೆಯ ಬಳಿಕ ತಿಳಿದುಬರಬೇಕಿದೆ.


