Saturday, September 12, 2026

spot_img

ಆಶ್ರಯ ಮನೆ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬ: ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಆಶ್ರಯ ಮನೆ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಪತ್ತೊಂಜಿಕಟ್ಟೆಯ ಗುಂಪು ಮನೆ ನಿವೇಶನದ ಎದುರು ಪ್ರತಿಭಟನೆ ನಡೆಯಿತು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕಾರ್ಕಳ ಪುರಸಭಾ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ಪತ್ತೊಂಜಿಕಟ್ಟೆಯಲ್ಲಿ ಗುಂಪು ಮನೆ ಮಾದರಿಯಲ್ಲಿ 250 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಅರ್ಹ ಫಲಾನುಭವಿಗಳ ಆಯ್ಕೆ ಪೂರ್ಣಗೊಳ್ಳದ ಕಾರಣ ಮನೆ ನಿರ್ಮಾಣ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಶಾಸಕರು ಈವರೆಗೆ ಕೇವಲ ಒಂದು ಬಾರಿ ಆಶ್ರಯ ಸಮಿತಿ ಸಭೆ ನಡೆಸಿದ್ದಾರೆ. ನೂರಾರು ಬಡ ಅರ್ಜಿದಾರರು ಈಗಾಗಲೇ ಮುಂಗಡ ಹಣ ಪಾವತಿಸಿದ್ದರೂ ಸ್ವಂತ ಮನೆಯ ಕನಸು ನನಸಾಗದೆ ಉಳಿದಿದೆ ಎಂದು ದೂರಿದರು.

ಸರ್ಕಾರದ ಹೊಸ ನಿಯಮದಂತೆ ಕೇವಲ ರೂ.1 ಲಕ್ಷದಲ್ಲಿ ಮನೆ ದೊರೆಯಲಿದ್ದು, ಫಲಾನುಭವಿಗಳು ಆರಂಭಿಕವಾಗಿ ರೂ.10 ಸಾವಿರ ಮುಂಗಡ ಪಾವತಿಸಲು ಅವಕಾಶವಿದೆ. ಆದರೆ ಫಲಾನುಭವಿಗಳ ಆಯ್ಕೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಉಳಿದ ಮೊತ್ತ ಪಾವತಿಸಲು ಸಾಧ್ಯವಾಗದೆ ಮನೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಶೀಘ್ರ ಅರ್ಹ ಫಲಾನುಭವಿಗಳ ಆಯ್ಕೆ ಪೂರ್ಣಗೊಳಿಸಿ ಕಾಮಗಾರಿಗೆ ವೇಗ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡ ಉದಯ್ ಶೆಟ್ಟಿ ಮುನಿಯಾಲು ಮಾತನಾಡಿ, ಬಡಜನರ ಸ್ವಂತ ಸೂರಿನ ಕನಸು ನನಸಾಗಿಸುವುದು ಕಾಂಗ್ರೆಸ್‌ನ ಬದ್ಧತೆಯಾಗಿದೆ. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರ ಗಮನಕ್ಕೆ ತಂದು, ಫಲಾನುಭವಿಗಳ ಆಯ್ಕೆಯಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles