Saturday, September 12, 2026

spot_img

ಕರಾವಳಿಗೆ ಸರ್ಕಾರಿ ಕೃಷಿ ಕಾಲೇಜು ಅಗತ್ಯ..

ಉಡುಪಿ: ಕರಾವಳಿಯ ಮೂರು ಜಿಲ್ಲೆಗಳನ್ನು ಒಳಗೊಂಡ ಪ್ರದೇಶದಲ್ಲಿ ಒಂದೂ ಸರ್ಕಾರಿ ಬಿ.ಎಸ್ಸಿ. ಕೃಷಿ ಕಾಲೇಜು ಇಲ್ಲದಿರುವುದರಿಂದ, ಕೃಷಿ ಶಿಕ್ಷಣ ಪಡೆಯಲು ಆಸಕ್ತರಾಗಿರುವ ರೈತ ಕುಟುಂಬಗಳ ಮಕ್ಕಳು ದೂರದ ಬೆಂಗಳೂರು, ಮಂಡ್ಯ, ಧಾರವಾಡ, ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬ್ರಹ್ಮಾವರದಲ್ಲೇ ಕೃಷಿ ಕಾಲೇಜು ಸ್ಥಾಪಿಸುವ ಅಗತ್ಯವಿದೆ ಎಂದು ಡಾ. ರವಿರಾಜ ಶೆಟ್ಟಿ ಜಿ. ಅವರು ಒತ್ತಾಯಿಸಿದ್ದಾರೆ.

ಬ್ರಹ್ಮಾವರದಲ್ಲಿ ಈಗಾಗಲೇ ಕೃಷಿ ಕಾಲೇಜು ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯ, ವಿಶಾಲ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಲಭ್ಯವಿವೆ. ಕಾಲೇಜು ಆರಂಭವಾದರೆ ಸ್ಥಳೀಯ ವಿದ್ಯಾರ್ಥಿಗಳು ಕರಾವಳಿಯ ಕೃಷಿ ಪದ್ಧತಿ, ಬೆಳೆಗಳ ಸಮಸ್ಯೆ ಹಾಗೂ ಹವಾಮಾನಕ್ಕೆ ಸಂಬಂಧಿಸಿದ ಸವಾಲುಗಳನ್ನು ನೇರವಾಗಿ ಅಧ್ಯಯನ ಮಾಡುವ ಅವಕಾಶ ದೊರೆಯಲಿದೆ. ಸಂಶೋಧನಾ ಕೇಂದ್ರಗಳಲ್ಲಿ ಅಭಿವೃದ್ಧಿಪಡಿಸುವ ಆಧುನಿಕ ಕೃಷಿ ಪದ್ಧತಿ, ತಳಿಗಳು ಹಾಗೂ ತಂತ್ರಜ್ಞಾನಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಸಹಕಾರಿಯಾಗಲಿದೆ.

ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಣೆ ಸೇರಿದಂತೆ ಕೃಷಿ ಆಧಾರಿತ ಉದ್ಯಮಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಕುರಿತು ಯುವಜನರಿಗೆ ಸ್ಥಳೀಯವಾಗಿಯೇ ತರಬೇತಿ ದೊರೆಯಲಿದೆ. ಕಾಲೇಜು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದ ಬಳಿಕ ಬ್ರಹ್ಮಾವರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಲಿವೆ. ಕೃಷಿ ಕಾಲೇಜು ಸ್ಥಾಪನೆಗೆ ಜನಪ್ರತಿನಿಧಿಗಳು ಹಾಗೂ ರೈತರು ಕಳೆದ ಸುಮಾರು 15 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಬ್ರಹ್ಮಾವರ ಕ್ಯಾಂಪಸ್‌ನಲ್ಲಿ 342 ಎಕರೆ ಭೂಪ್ರದೇಶ ಲಭ್ಯವಿದ್ದು, ಅಂದಾಜು ರೂ.20 ಕೋಟಿ ಮೌಲ್ಯದ ಮೂಲಸೌಕರ್ಯ ಈಗಾಗಲೇ ನಿರ್ಮಾಣಗೊಂಡಿದೆ ಎಂದು ತಿಳಿಸಲಾಗಿದೆ.

ಸರ್ಕಾರದಿಂದ ಅನುಮತಿ ಹಾಗೂ ಅಗತ್ಯ ಅನುದಾನ ಬಿಡುಗಡೆಯಾದಲ್ಲಿ ಪ್ರಸ್ತುತ ಕೃಷಿ ಡಿಪ್ಲೊಮಾ ಕಾಲೇಜನ್ನು ಕೃಷಿ ಅಥವಾ ತೋಟಗಾರಿಕಾ ಮಹಾವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಿ 2027–28ನೇ ಶೈಕ್ಷಣಿಕ ವರ್ಷದಿಂದಲೇ ಪದವಿ ಶಿಕ್ಷಣ ಆರಂಭಿಸಲು ಸಾಧ್ಯವಿದೆ ಎಂದು ಡಾ. ರವಿರಾಜ ಶೆಟ್ಟಿ ತಿಳಿಸಿದ್ದಾರೆ. ಕೃಷಿ ಕಾಲೇಜು ಸ್ಥಾಪನೆಯಾದರೆ ಬ್ರಹ್ಮಾವರವು ಕೇವಲ ತಾಲೂಕು ಕೇಂದ್ರವಾಗಿ ಉಳಿಯದೆ, ಕರಾವಳಿಯ ಪ್ರಮುಖ ಕೃಷಿ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಇದೆ. ಮುಂದಿನ ಹಂತದಲ್ಲಿ ಸ್ನಾತಕೋತ್ತರ ಕೃಷಿ ಶಿಕ್ಷಣಕ್ಕೂ ಅವಕಾಶ ಕಲ್ಪಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles