ಉಡುಪಿ : ಸರಕಾರಿ ಜಮೀನಿನಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಸ್ಫೋಟಕ ವಸ್ತು ಬಳಸಿ ಬಂಡೆ ಕಲ್ಲುಗಳನ್ನು ಸ್ಫೋಟಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಪ್ರದೇಶದ ಸರ್ವೆ ನಂ.112/2ರ 1.54 ಎಕರೆ ಸರಕಾರಿ ಜಮೀನಿನಲ್ಲಿ ಸೆ.5ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಂಡೆ ಕಲ್ಲುಗಳನ್ನು ಸ್ಫೋಟಿಸಿರುವುದಾಗಿ ಮರ್ಣೆ ಗ್ರಾಮದ ಜೆರಾಲ್ಡ್ ನೊರೋಹ್ನ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಂತೆ, ರೋಜಿನಾ ರೋಡ್ರಿಗಸ್ ಹಾಗೂ ಅವರ ಪರವಾಗಿ ಅಧಿಕಾರ ಪತ್ರ ಹೊಂದಿರುವ ರಿಚಾರ್ಡ್ ಪೌಲ್ ಫೆರಾವೋ ಅವರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ, ಯಾವುದೋ ಸ್ಫೋಟಕ ವಸ್ತುವನ್ನು ಅನಧಿಕೃತವಾಗಿ ಬಳಸಿ ಜಮೀನಿನಲ್ಲಿದ್ದ ಬಂಡೆ ಕಲ್ಲುಗಳನ್ನು ಸ್ಫೋಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


