ಉಡುಪಿ : ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಚಡ ರೈಲು ಹಳಿಗಳ ಬಳಿ ಹಿರಿಯ ವ್ಯಕ್ತಿಯೊಬ್ಬರು ವಿವಸ್ತ್ರ ಸ್ಥಿತಿಯಲ್ಲಿ ಅಸ್ವಸ್ಥರಾಗಿ ಪತ್ತೆಯಾಗಿದ್ದು, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಕಾಪು ಪೊಲೀಸ್ ಸಿಬ್ಬಂದಿ ಮಂಜುನಾಥ ಶೆಟ್ಟಿ ಅವರ ನೆರವಿನಿಂದ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ಮೂಲದ ಶಶಿ ಶೇಖರ್ ಠಾಕೂರ್ (67) ಅವರು ರೈಲು ಹಳಿ ಸಮೀಪ ನಡೆಯಲೂ ಸಾಧ್ಯವಾಗದೆ ದಣಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೇಲ್ನೋಟಕ್ಕೆ ಅವರು ಮರೆವಿನ ಸಮಸ್ಯೆ ಅಥವಾ ಖಿನ್ನತೆಯಿಂದ ಬಳಲುತ್ತಿರುವಂತೆ ಕಂಡುಬಂದಿದ್ದು, ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಪೊಲೀಸರ ಸಹಾಯದಿಂದ ಅವರನ್ನು ರಕ್ಷಿಸಿದ್ದಾರೆ.

ವ್ಯಕ್ತಿಯ ಬಳಿಯಿದ್ದ ಗುರುತಿನ ಚೀಟಿಗಳನ್ನು ಪರಿಶೀಲಿಸಿದಾಗ ಅವರು ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವುದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅವರ ಬ್ಯಾಗ್ನಲ್ಲಿ ಸುಮಾರು 47 ಸಾವಿರ ನಗದು, ಬಟ್ಟೆ ಹಾಗೂ ಗುರುತಿನ ಚೀಟಿಗಳು ಪತ್ತೆಯಾಗಿವೆ. ಮಾಹಿತಿ ತಿಳಿದಿರುವವರು ಅಥವಾ ಅವರ ಸಂಬಂಧಿಕರು ಕಾಪು ಪೊಲೀಸ್ ಠಾಣೆ ಅಥವಾ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.



