Tuesday, July 28, 2026

spot_img

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ಪತ್ತೆ: 160 ಕ್ವಿಂಟಲ್ ಅಕ್ಕಿ, ಲಾರಿ ವಶ

ಉಡುಪಿ : ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕೋಟ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಭೇದಿಸಿದ್ದು, 160 ಕ್ವಿಂಟಲ್ ಅಕ್ಕಿ ಮತ್ತು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಬ್ರಹ್ಮಾವರ ಆಹಾರ ನಿರೀಕ್ಷಕ ವಸಂತ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಯೊಂದಿಗೆ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಮಹಾಲಕ್ಷ್ಮೀ ಹೋಟೆಲ್ ಎದುರು ದಾಳಿ ನಡೆಸಲಾಯಿತು.

ಈ ವೇಳೆ ಅಶೋಕ್ ಲೇಲ್ಯಾಂಡ್ ಲಾರಿಯಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಉಚಿತ ಪಡಿತರ ಅಕ್ಕಿಯನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ಪ್ರಾಥಮಿಕ ತನಿಖೆಯಲ್ಲಿ ಕುಮಟಾ ತಾಲೂಕಿನ ನಾಡಮಸ್ಕಿರಿಯ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್ ಮಾಲೀಕ ನಾಗರಾಜ್ ನಾಯ್ಕ್ ಅಕ್ಕಿಯನ್ನು ಲಾರಿಗೆ ತುಂಬಿಸಿ, ಕೇರಳದ ಕಾಸರಗೋಡಿನ ಶಾಜಿ ಟ್ರೇಡಿಂಗ್ ಕಂಪೆನಿಗೆ ಕಳುಹಿಸುತ್ತಿದ್ದರೆಂದು ತಿಳಿದುಬಂದಿದೆ. ಲಾರಿ ಮಾಲೀಕ ಗಿರೀಶ್ ನಾಯ್ಕ್ ಅವರ ಸೂಚನೆಯಂತೆ ಚಾಲಕ ಕೆ. ನರಸಿಂಹ ಅಕ್ಕಿಯನ್ನು ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ವೇಳೆ 320 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 160 ಕ್ವಿಂಟಲ್ ಪಡಿತರ ಅಕ್ಕಿ, ಇದರ ಅಂದಾಜು ಮೌಲ್ಯ ರೂ3.84 ಲಕ್ಷ, ಹಾಗೂ ಸುಮಾರು ರೂ 3.50 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ ರೂ 7.34 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಬ್ರಹ್ಮಾವರ ಆಹಾರ ನಿರೀಕ್ಷಕ ವಸಂತ ಕುಮಾರ್ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles