ಉಡುಪಿ : ಸುಮಾರು 36 ವರ್ಷಗಳಿಂದ ನ್ಯಾಯಾಲಯದ ವಾರಂಟ್ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನ ಹಾಗೂ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ನಿರ್ದೇಶನದಂತೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣದ ವಾರಂಟ್ ಆರೋಪಿ ಕಾರ್ಕಳ ಕಸಬ, ರಾಮಸಮುದ್ರ ನಿವಾಸಿ ಪೀಟರ್ ಆಗಸ್ಟಿನ್ ಮಾರ್ಟೀಸ್ (60) ನನ್ನು ಬಂಧಿಸಲಾಗಿದೆ. ಆರೋಪಿ ಕಳೆದ 36 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ಕಾರ್ಕಳ ತಾಲೂಕಿನ ರಾಮಸಮುದ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಹೆಚ್ಸಿ ಲೋಕೇಶ್ ಮತ್ತು ಹೆಚ್ಸಿ ಸಂಜಯ್ ಆರೋಪಿಯನ್ನು ವಶಕ್ಕೆ ಪಡೆದರು. ಬಂಧಿತ ಆರೋಪಿಯನ್ನು ಸೋಮವಾರ ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


