ಉಡುಪಿ : ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ಶಿಕ್ಷಣ ಸಂಸ್ಥೆಗಳ ನಾಲ್ಕು ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ನಡೆಯಿತು. ವಿವೇಕ ಹೈಸ್ಕೂಲ್, ವಿವೇಕ ಪದವಿ ಪೂರ್ವ ಕಾಲೇಜು, ವಿವೇಕ ಬಾಲಿಕಾ ಪ್ರೌಢಶಾಲೆ ಹಾಗೂ ವಿವೇಕ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಇಂಟರಾಕ್ಟ್ ಕ್ಲಬ್ಗಳ ನೂತನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಇಂಟರಾಕ್ಟ್ ಸಭಾಪತಿ ಗಣೇಶ್ ಶೆಟ್ಟಿ ಮಳವಳ್ಳಿ ನಡೆಸಿಕೊಟ್ಟರು. ಆರಂಭದಲ್ಲಿ ಶಾಲೆಯ ಪ್ರಾಂಶುಪಾಲ ಜಗದೀಶ್ ನಾವಡ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ಶೆಟ್ಟಿ ಮಳವಳ್ಳಿ, ಇಂಟರಾಕ್ಟ್ ಕ್ಲಬ್ಗಳ ಉದ್ದೇಶ, ಮಹತ್ವ, ಸಮಾಜಮುಖಿ ಸೇವಾ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ನಾಯಕತ್ವ ಬೆಳೆಸಿಕೊಳ್ಳಲು ದೊರೆಯುವ ಅವಕಾಶಗಳ ಕುರಿತು ವಿವರವಾಗಿ ತಿಳಿಸಿದರು. ಇಂಟರಾಕ್ಟ್ ಸಭಾಪತಿ ಕುಸುಮ ಶೆಟ್ಟಿ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಸಮಾಜ ಸೇವೆಯ ಮೂಲಕ ಉತ್ತಮ ನಾಯಕತ್ವ ಪ್ರದರ್ಶಿಸುವಂತೆ ಕರೆ ನೀಡಿದರು.

ಜಿಲ್ಲಾ ಡಿಐಆರ್ ಸೃಷ್ಟಿ ಮಾತನಾಡಿ, ಇಂಟರಾಕ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಸನ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ದೊರೆಯುವ ವಿವಿಧ ಅವಕಾಶಗಳ ಕುರಿತು ಮಾಹಿತಿ ನೀಡಿದರು.ಸಮಾರಂಭದಲ್ಲಿ ನಾಲ್ಕು ಇಂಟರಾಕ್ಟ್ ಕ್ಲಬ್ಗಳ ನೂತನ ಅಧ್ಯಕ್ಷರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಸೇವಾ ಚಟುವಟಿಕೆಗಳನ್ನು ಉತ್ಸಾಹದಿಂದ ಕೈಗೊಂಡು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಸಂದೇಶವನ್ನು ಸಾರಿದ ಈ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾಗಿ ಮತ್ತು ಸ್ಮರಣೀಯವಾಗಿ ನೆರವೇರಿತು.

ವಿವೇಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಪ್ರೇಮಾನಂದ, ವೆಂಕಟೇಶ್ ಉಡುಪ ಹಾಗೂ ಶ್ರೀಮತಿ ಪ್ರೀತಿ ರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ಇಂಟರಾಕ್ಟ್ ಸಂಚಾಲಕರಾದ ಕೃಷ್ಣ, ನರೇಂದ್ರ ಕುಮಾರ್, ಶ್ರೀಮತಿ ವಿನುತ ಹಾಗೂ ಶ್ರೀಮತಿ ಅಶ್ವಿನಿ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶ್ರಮಿಸಿದರು.


